ಯೋಧನ ಮೇಲೆ ಕೈ ಮಾಡುತ್ತಿರುವ ಮಹಿಳೆ
ನವದೆಹಲಿ: ಕ್ಷುಲ್ಲಕ ಕಾರಣಕ್ಕೆ ಯೋಧನ ಮೇಲೆ ಕೈ ಮಾಡಿದ ಗುರುಗ್ರಾಮ್ ಮೂಲದ ಮಹಿಳೆಯನ್ನು ದೆಹಲಿ ಪೊಲೀಸರು ಶುಕ್ರವಾರ ಬಂಧಿಸಿದ್ದು, ಬಳಿಕ ಆರೋಪಿ ಜಾಮೀನನ ಮೇಲೆ ಬಿಡುಗಡೆಯಾಗಿದ್ದಾಳೆ.
ಕಳೆದ ಶನಿವಾರ ವಸಂತ್ ಕುಂಜ್ ಪ್ರದೇಶದಲ್ಲಿ 44 ವರ್ಷದ ಸ್ಮೃತಿ ಕರ್ಲಾ ಎಂಬ ಮಹಿಳೆ ಯೋಧನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಪ್ರತ್ಯಕ್ಷ ದರ್ಶಿಗಳ ಮೊಬೈಲ್ ನಲ್ಲಿ ಸೆರೆಯಾಗಿತ್ತು. ಬಳಿಕ ಆ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ ಮಹಿಳೆಯ ವರ್ತನೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ದೃಶ್ಯವನ್ನು ಮತ್ತೊಂದು ಕಾರಿನಲ್ಲಿದ್ದವರು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.
ಘಟನೆಯ ನಂತರ ಭಾರತೀಯ ಸೇನೆ ದೆಹಲಿ ಪೊಲೀಸರಿಗೆ ದೂರು ನೀಡಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಂದು ಆರೋಪಿಯನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಕಳೆದ ವಾರ ಜನನಿಬಿಡ ಪ್ರದೇಶದಲ್ಲಿ ಮಹಿಳೆ ತನ್ನ ಕಾರು ನಿಲ್ಲಿಸಿರುತ್ತಾಳೆ. ಈ ವೇಳೆ ಸೇನಾ ವಾಹನ ಬಂದು ತನ್ನ ಕಾರಿಗೆ ಡಿಕ್ಕಿ ಹೊಡೆಯಿತು ಎಂದು ಆರೋಪಿಸಿದ ಮಹಿಳೆ ಯೋಧನ ಕೆನ್ನೆಗೆ ರಪರಪನೇ ಬಾರಿಸಿದ್ದಳು.