ನವದೆಹಲಿ: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಆಗಬೇಕು. ಅದನ್ನು ಕೋರ್ಟ್ ಸ್ವತಃ ರಚಿಸುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ. ಇದರಿಂದ ಕಾವೇರಿ ವಿವಾದದಲ್ಲಿ ರಾಜ್ಯಕ್ಕೆ ಹಿನ್ನೆಡೆ ಉಂಟಾಗಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದು, ಈಗಾಗಲೇ ನರ್ಮದಾ, ಕೃಷ್ಣಾ ನೀರು ನಿರ್ವಹಣಾ ಮಂಡಳಿ ರಚನೆ ಆಗಿದೆ. ಅದರಂತೆಯೇ ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆಯಾಗಬೇಕು ಎಂದಿದೆ.
ಕಾವೇರಿ ನಿರ್ವಹಣಾ ಮಂಡಳಿ ಹೇಗಿರಬೇಕು ಎನ್ನುವುದನ್ನು ಮುಂದಿನ ದಿನಗಳಲ್ಲಿ ನಾವೇ ತಿಳಿಸುತ್ತೇವೆ ಎಂದು ತ್ರಿಸದಸ್ಯ ಪೀಠ ರಾಜ್ಯದ ವಕೀಲರುಗಳಿಗೆ ತಿಳಿಸಿದೆ.
ಕಾವೇರಿ ನ್ಯಾಯಾಧಿಕರಣ ತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ, ಕೇಂದ್ರ ಸರ್ಕಾರ ವಾದ ಮಂಡಿಸಿತ್ತು. ನದಿ ನೀರು ನಿರ್ವಹಣಾ ಮಂಡಳಿ ರಚನೆ ಅಧಿಕಾರ ನ್ಯಾಯಾಲಯಕ್ಕಿಲ್ಲ ಎಂದು ಕೇಂದ್ರ ಕೋರ್ಟ್ ಗೆ ಹೇಳಿತ್ತು.
ಕೇಂದ್ರ ಸರ್ಕಾರದ ಪರ ವಕೀಲ ರಂಜಿತ್‌ಕುಮಾರ್, "ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವುದು ಸಂಸತ್ತಿನ ಅಧಿಕಾರ. ಜತೆಗೆ, ಇದಕ್ಕೆ ತಿದ್ದುಪಡಿ ಮಾಡುವುದು ಕೂದ ಸಂಸತ್ತಿಗೆ ಬಿಟ್ಟ ಅಧಿಕಾರ. ಇದಕ್ಕಾಗಿ ಈಗಾಗಲೇ ಕರಡು ಸಿದ್ಧಪಡಿಸಲಾಗಿದೆ" ಎಂದು ಹೇಳಿದರು.
ಅವರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಕೇಂದ್ರ ಸರ್ಕಾರ ಕೋರ್ಟ್‌ನ ಆದೇಶ ಪಾಲಿಸಬೇಕು ಎಂದಿದ್ದಾರೆ.