ಗೋರಖ್'ಪುರ: ಶಾಲೆಯಲ್ಲಿ ಶಿಕ್ಷಕ ನೀಡುತ್ತಿದ್ದ ಹಿಂಸೆಯನ್ನು ತಾಳಲಾರೆದ ತೀವ್ರವಾಗಿ ನೊಂದಿದ್ದ 5ನೇ ತರಗತಿ ವಿದ್ಯಾರ್ಥಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗುರುವ ದಾರುಣ ಘಟನೆ ಉತ್ತರಪ್ರದೇಶದ ಗೋರಖ್'ಪುರದಲ್ಲಿ ನಡೆದಿದೆ.
ಸೈಂಟ್ ಆ್ಯಂಥನಿ ಕಾನ್ವೆಂಟ್ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ 11 ವರ್ಷದ ಬಾಲಕ ನವನೀತ್ ಪ್ರಕಾಶ್ ಆತ್ಮಹತ್ಯೆಗೆ ಶರಣಾಗಿರುವ ಬಾಲಕನಾಗಿದ್ದಾನೆ.
ಸೆ.15ರಂದು ಪರೀಕ್ಷೆ ಇದ್ದರಿಂದ ಎಂದಿನಂತೆ ಬಾಲಕ ಶಾಲೆಗೆ ಹೋಗಿದ್ದಾನೆ. ಶಾಲೆ ಮುಗಿಸಿಕೊಂಡು ಮನೆಗೆ ಬಂದಾಗ ಬಾಲಕ ತೀವ್ರವಾಗಿ ಮನನೊಂದಿದ್ದ. ಬಳಿಕ ಅದೇ ದಿನ ನವನೀತ್ ವಿಷ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡಿದ್ದ. ಬಳಿಕ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.
ಶಾಲೆಯಿಂದ ಮನೆಗೆ ಬಂದಾಗಲೇ ಪುತ್ರ ತೀವ್ರವಾಗಿ ನೊಂದಿದ್ದ. ಶಿಕ್ಷಕರು ಪುತ್ರನಿಗೆ ಅತೀವ್ರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಶಿಕ್ಷಕನ ವಿರುದ್ಧ ಪೋಷಕರು ಎಫ್ಐಆರ್ ದಾಖಲಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಬಾಲಕ ಡೆತ್ ನೋಟ್ ಬರೆದಿದ್ದು, ಶಿಕ್ಷಕರು ನನಗೆ ಮೂರು ತಾಸಿಗೂ ಹೆಚ್ಚು ಕಾಲ ತರಗತಿಯ ಕುರ್ಚಿ ಮೇಲೆ ನಿಲ್ಲಿಸುತ್ತಿದ್ದರು. ಅಲ್ಲದೆ, ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು. ನನಗೆ ಕೊಟ್ಟಿರುವಂತಹ ತೀವ್ರ ರೀತಿಯ ಶಿಕ್ಷೆಯನ್ನು ಬೇರಾವುದೇ ವಿದ್ಯಾರ್ಥಿಗೂ ಕೊಡಬೇಡಿ ಎಂದು ಶಿಕ್ಷಕರಿಗೆ ಹೇಳಿ ಎಂದು ಹೇಳಿಕೊಂಡಿದ್ದಾನೆಂದು ತಿಳಿದುಬಂದಿದೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣ ಸಂಬಂಧ ಈ ವರೆಗೂ ಯಾರೊಬ್ಬರನ್ನೂ ಪೊಲೀಸರು ಬಂಧನಕ್ಕೊಳಪಡಿಸಿಲ್ಲ.