ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮುಕುಲ್ ರಾಯ್ ತಾನು ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ. ಪಕ್ಷದ ಕಾರ್ಯ ನಿರ್ವಹಣೆ ಸಮಿತಿಯಿಂದ ಅವರು ಹೊರನಡೆದಿದ್ದಾರೆ.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ರಾಯ್ "ಭಾರವಾದ ಹೃದಯದಿಂದ ನಾನು ಪಕ್ಷ ತೊರೆಯುತ್ತಿದ್ದೇನೆ. ಪಕ್ಷವನ್ನು ತೊರೆಯುವಂತೆ ನನ್ನ ಮೇಲೆ ಒತ್ತಡಗಳಿದ್ದವು" ಎಂದು ಹೇಳಿದ್ದಾರೆ.
ಕಳೆದ ವಾರ ದೆಹಲಿಯಲ್ಲಿ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿ ಮಾಡಿದ್ದ ರಾಯ್ ಇಂದು ಪಕ್ಷಕ್ಕೆ ರಾಜೀನಾಮೆ ನಿಡಿದ್ದಾರೆ. ಬಂಗಾಳ ಬಿಜೆಪಿ ವಕ್ತಾರರು ಶನಿವಾರ ರಾಯ್ ಅವರನ್ನು "ಶ್ರೇಷ್ಠ ನಾಯಕ" ಎಂದು ಕರೆದಿದ್ದರು. ರಾಯ್ ಹಲವಾರು ಬಿಜೆಪಿ ಹಿರಿಯರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದರು.
ದುರ್ಗಾ ಪೂಜೆಯ ನಂತರ ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ರಾಯ್ ಹೇಳಿದ್ದಾರೆ. ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಸಂಬಂಧ ಹದಗೆಟ್ಟಿದ್ದ ಕಾರಣ ಅವರನ್ನು ಪಕ್ಷದಿಂದ ತೆಗೆದುಹಾಕಲಾಗಿದೆ.
2015ರಲ್ಲಿ, ಶಾರದಾ ಚಿಟ್ ಫಂಡ್ ಹಗರಣದಲ್ಲಿ ಪಾತ್ರ ವಹಿಸಿದ್ದಕ್ಕಾಗಿ ರಾಯ್ ಅವರನ್ನು ತೃಣಮೂಲ ಕಾಂಗ್ರೆಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾದಲಾಗಿತ್ತು.
ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯ ಮತ್ತು ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ಅವರನ್ನು ಆರು ವರ್ಷ ಕಾಲ ಪಕ್ಷದಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.
ಮುಕುಲ್ ರಾಯ್ ಅವರನ್ನು ಆರು ವರ್ಷ ಅಮಾನತು ಮಾಡಿದ್ದೇವೆ ಎಂದು ಟಿಎಂಸಿ ಕಾರ್ಯದರ್ಶಿ ಪಾರ್ಥ ಚಟರ್ಜಿ ತಿಳಿಸಿದ್ದಾರೆ.
"ಕೆಲ ದಿನಗಳಿಂದ ಪಕ್ಷವನ್ನು ದುರ್ಬಲಗೊಳಿಸಲು ರಾಯ್ ಪ್ರಯತ್ನಿಸುತ್ತಿದ್ದರು. ಪಕ್ಷದ ಶಿಸ್ತು ಸಮಿತಿಯು ಈ ಕುರಿತಂತೆ ಚರ್ಚಿಸಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಗೆ ರಾಯ್ ಅವರನ್ನು ಶಿಕ್ಷಿಸಲು ಶಿಫಾರಸು ಮಾದಿತು" ಎಂದು ಅವರು ಹೇಳಿದರು.