ಚಾಮುಂಡಾ ಮಾತಾಜಿ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ರಾಹುಲ್ ಗಾಂಧಿ
ನವದೆಹಲಿ: ಮೂರು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ದೇವಾಲಯಗಳಿಗೆ ಭೇಟಿ ನೀಡಿರುವುದಕ್ಕೆ ರಾಜಕೀಯ ಲೇಪ ಹಚ್ಚುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
ರಾಹುಲ್ ದೇವಾಲಯಗಳ ಭೇಟಿಯ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ನೀವು ಭಾವಿಸುವುದಿಲ್ಲ, ಬೇರೆ ಬೇರೆ ಕಾರಣಗಳಿಗಾಗಿ ಅವರು ಗುಜರಾತ್ ಭೇಟಿ ನೀಡಿದ್ದಾರೆ, ಅದರ ಬಗ್ಗೆ ನಾವು ಗಮನ ನೀಡೋಣ ಎಂದು ಕಾಂಗ್ರೆಸ್ ವಕ್ತಾರ ಪಿ.ಚಿದಂಬರಂ ಹೇಳಿದ್ದಾರೆ.
ಗುಜರಾತ್ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಿದಂಬರಂ, ಪ್ರತಿಯೊಬ್ಬ ರಾಜಕಾರಣಿ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ದೇವಾಲಯಗಳಿಗೆ ತೆರಳುತ್ತಾರೆ, ಜೊತೆಗೆ ವಿವಿಧ ಸ್ಥಳಗಳಿಗೆ ಹಾಗೂ ದೇವಾಲಯಗಳಿಗೆ ಅವರ ಬೆಂಬಲಿಗರ ಒತ್ತಾದ ಮೇರೆಗೆ ಭೇಟಿ ನೀಡುತ್ತಾರೆ, ಪ್ರತಿಯೊಬ್ಬರ ನಂಬಿಕೆ ಮತ್ತು ಆಚರಣೆಗಳನ್ನು ನಾವು ಸಮಾನವಾಗಿ ಗೌರವಿಸುವುದು ಕಾಂಗ್ರೆಸ್ ಪಕ್ಷದ ಹೃದಯ ಶ್ರೀಮಂತಿಕೆಯಾಗಿದೆ.
ಜವಹರ್ ಲಾಲ್ ನೆಹರು, ಇಂದಿರಾ ಗಾಂಧಿ, ಇರುವಾಗಿನಿಂದಾಗಲೂ ಈ ಪದ್ಧತಿ ಪಾಲಿಸಿಕೊಂಡು ಬರಲಾಗುತ್ತಿದೆ ಎಂದ ಅವರು, ಗುಜರಾತಿನ ದೇವಾಲಯಗಳಿಗೆ ಭೇಟಿ ನೀಡುತ್ತಿರುವುದು ಹಿಂದೂ ಮತದಾರರ ಓಲೈಕೆಗಾಗಿ ಮಾಡುತ್ತಿರುವ ಪ್ರಯತ್ನ ಎಂಬ ಆರೋಪವನ್ನು ತಳ್ಳಿ ಹಾಕಿದರು.
ರಾಜ್ಯದ ಯಾವುದಾದರೊಂದು ಕ್ಷೇತ್ರಕ್ಕೆ ಭೇಟಿ ನೀಡಿದಾಗ ಅಲ್ಲಿನ ಸ್ಥಳೀಯ ರಾಜಕಾರಣಿಗಳ ಒತ್ತಾಯದ ಮೇರೆಗೆ ದೇವಾಲಯ, ಮಸೀದಿ ಮತ್ತು ಚರ್ಚ್ ಗೆ ಭೇಟಿ ನೀಡುವುದು ಅನಿವಾರ್ಯವಾಗತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.