ನವದೆಹಲಿ: ಯಶ್ವಂತ್ ಸಿನ್ಹಾ 80 ರ ವಯಸ್ಸಿನಲ್ಲಿ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ ಎಂಬ ಕೇಂದ್ರ ಸಚಿವ ಅರುಣ್ ಜೇಟ್ಲಿ ಆರೋಪಕ್ಕೆ ಯಶ್ವಂತ್ ಸಿನ್ಹಾ ತಿರುಗೇಟು ನೀಡಿದ್ದು, ನಾನು ಒಂದು ವೇಳೆ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರೆ ಅರುಣ್ ಜೇಟ್ಲಿ ವಿತ್ತ ಸಚಿವರಾಗಿರುತ್ತಿರಲಿಲ್ಲ ಎಂದಿದ್ದಾರೆ.
ಅರುಣ್ ಜೇಟ್ಲಿ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿರುವ ಯಶ್ವಂತ್ ಸಿನ್ಹಾ, ಒಂದೇ ಒಂದು ಲೋಕಸಭಾ ಚುನಾವಣೆ ಗೆಲ್ಲಲು ಸಾಧ್ಯವಾಗದವರು ನನ್ನ ವಿರುದ್ಧ ಆರೋಪ ಮಾಡಿ, ಕಪ್ಪು ಹಣದ ವಿಷಯವಾಗಿ ದೇಶದ ಜನತೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಿನ್ಹಾ ಹೇಳಿದ್ದಾರೆ.
ನಾನು ನಿವೃತ್ತಿಗೂ 12 ವರ್ಷ ಮೊದಲೇ ಐಎಎಸ್ ವೃತ್ತಿಯನ್ನು ಬಿಟ್ಟು ರಾಜಕೀಯಕ್ಕೆ ಬಂದೆ, ನನ್ನ ಹಿನ್ನೆಲೆಯನ್ನು ಬಹುಶಃ ಅರುಣ್ ಜೇಟ್ಲಿ ಮರೆತಿದ್ದಾರೆ ಎನಿಸುತ್ತದೆ. ರಾಜಕೀಯಕ್ಕೆ ಬಂದ ನಂತರ ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ ಎಂದಿದ್ದಾರೆ.
ಸಿನ್ಹಾ, ಪಿ ಚಿದಂಬರಂ ತಾಳಕ್ಕೆ ಕುಣಿಯುತ್ತಿದ್ದಾರೆ ಎಂಬ ಜೇಟ್ಲಿ ಅವರ ಆರೋಪಕ್ಕೂ ಪ್ರತಿಕ್ರಿಯೆ ನೀಡಿರುವ ಸಿನ್ಹಾ, ಪಿ. ಚಿದಂಬರಂ ಅರುಣ್ ಜೇಟ್ಲಿ ಅವರ ಸ್ನೇಹಿತರೇ ಹೊರತು ನನಗಲ್ಲ ಎಂದು ಹೇಳಿದ್ದಾರೆ. ನನಗೆ ರಾಜಕೀಯಕ್ಕೆ ಬಂದ ನಂತರ ಲೋಕಸಭಾ ಕ್ಷೇತ್ರವನ್ನು ಆರಿಸಿಕೊಳ್ಳಲು 25 ವರ್ಷ ಬೇಕಾಗಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲಾಗದವರು ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಸಿನ್ಹಾ ಅರುಣ್ ಜೇಟ್ಲಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ್ದ ಅರುಣ್ ಜೇಟ್ಲಿ, ಯಶ್ವಂತ್ ಸಿನ್ಹಾ 80 ರ ವಯಸ್ಸಿನಲ್ಲಿ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ ಎಂದಿದ್ದರು.