ನವದೆಹಲಿ: ದಸರಾದಂತಹ ಹಬ್ಬಗಳು ಕೇವಲ ಮನರಂಜನೆಗಾಗಿ ಮಾತ್ರವಲ್ಲದೇ, ಸಮಾಜಕ್ಕೆ, ದೇಶಕ್ಕೆ ಕೊಡುಗೆ ನೀಡಲು ಪ್ರೇರಣೆ ನೀಡುವ ಆಚರಣೆಗಳಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ವಿಜಯದಶಮಿಯ ಅಂಗವಾಗಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ದಸರಾದಂತಹ ಹಬ್ಬಗಳನ್ನು ಕೇವಲ ಮನರಂಜನೆಯಂತೆ ಭಾವಿಸಬಾರದು, ಸಮಾಜಕ್ಕೆ ಕೊಡುಗೆ ನೀಡಲು ನಮ್ಮನ್ನು ಪ್ರೇರೇಪಿಸುವ ಆಚರಣೆಗಳನ್ನಾಗಿ ಭಾವಿಸಬೇಕು ಎಂದು ಹೇಳಿದ್ದು, 2022 ರ ವೇಳೆಗೆ ನವ ಭಾರತದ ನಿರ್ಮಾಣಕ್ಕೆ ಸಕಾರಾತ್ಮಕ ಕೊಡುಗೆ ನೀಡುವುದಕ್ಕೆ ವಿಜಯದಶಮಿಯಂದು ನಿರ್ಣಯ ಮಾಡುವಂತೆ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ.
ನಮ್ಮ ಹಬ್ಬಗಳು ಕೃಷಿ, ನದಿ, ಪರ್ವತ, ಇತಿಹಾಸ, ಸಂಸ್ಕೃತಿಗಳೊಂದಿಗೆ ಬೆಸೆದಿವೆ. ಹಬ್ಬಗಳಿಂದ ಸಮಾಜಿಕ ಬಂಧ ಮತ್ತಷ್ಟು ಗಟ್ಟಿಗೊಂಡು ಮೌಲ್ಯಗಳನ್ನು ಉಳಿಸಲು ಸಾಧ್ಯವಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಸಾವಿರಾರು ವರ್ಷಗಳು ಕಳೆದರೂ ಭಗವಾನ್ ರಾಮ, ಭಗವಾನ್ ಕೃಷ್ಣರ ಸಿದ್ಧಾಂತಗಳು ಇಂದಿಗೂ ಮನುಕುಲಕ್ಕೆ ಪ್ರೇರಣೆಯಾಗಿವೆ. ರಾವಣನನ್ನು ದಹಿಸುವುದು ಆಚರಣೆಯ ಒಂದು ಭಾಗ, ದೇಶದ ಪ್ರಜೆಗಳಾಗಿ ಸಮಾಜದಲ್ಲಿರುವ ರಾವಣ ಪ್ರವೃತ್ತಿಯನ್ನು ಅಂತ್ಯಗೊಳಿಸಲು ಶ್ರಮಿಸಬೇಕಿದೆ, ರಾವಣನ ವಧೆಯ ನಂತರ ಭಗವಾನ್ ರಾಮ ವಿನಮ್ರತೆಯಿಂದ ಸಮಾಜಕ್ಕೆ ಸೇವೆ ಸಲ್ಲಿಸಿದ, ಭಾರತೀಯರ ನಾಗರಿಕರಾಗಿ ನಾವು 2022 ರ ವೇಳೆಗೆ ದೇಶಕ್ಕಾಗಿ ಸಕಾರಾತ್ಮಕವಾದುದ್ದನ್ನು ನೀಡಲು ವಿಜಯದಶಮಿಯಂದು ನಿರ್ಣಯ ಕೈಗೊಳ್ಳೋಣ ಎಂದು ಮೋದಿ ಕರೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics