ಚೀನಾ ರಾಯಭಾರಿ ಕಚೇರಿಯ ಅಧಿಕಾರಿ
ನವದೆಹಲಿ: ಡೋಕ್ಲಾಮ್ ವಿವಾದದ ವಿಷಯದಲ್ಲಿ ಭಾರತದ ಎದುರು ಮಂಡಿಯೂರಿದ್ದ ಚೀನಾ ಈಗ ಹಿಂದಿನದೆಲ್ಲವನ್ನೂ ಮರೆತುಬಿಡುವಂತೆ ಭಾರತಕ್ಕೆ ಮನವಿ ಮಾಡಿದ್ದು, ಇನ್ನು ಮುಂದೆ ಒಟ್ಟಿಗೆ ಮುನ್ನಡೆಯೋಣ ಎಂಬ ಸಲಹೆ ನೀಡಿದೆ.
ಭಾರತದಲ್ಲಿರುವ ಚೀನಾದ ರಾಯಭಾರಿ ಕಚೇರಿಯ ಅಧಿಕಾರಿ ಲುವೊ ಝಾಹೋಯಿಯಿ ಭಾರತ-ಚೀನಾ ದ್ವಿಪಕ್ಷೀಯ ಸಂಬಂಧದ ಬಗ್ಗೆ ಮಾತನಾಡಿದ್ದು, ಹಿಂದಿನದ್ದನ್ನು ಮರೆತು ಒಟ್ಟಿಗೆ ಮುನ್ನಡೆಯಲು ಭಾರತ-ಚೀನಾಗೆ ಇದು ಸಕಾಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತ-ಚೀನಾ ದ್ವಿಪಕ್ಷೀಯ ಸಂಬಂಧದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಇತ್ತೀಚೆಗಷ್ಟೇ ನಡೆದ ಬಿಕ್ಸ್ ಶೃಂಗಸಭೆಯಲ್ಲಿ ಭೇಟಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಅವರು ಸಮನ್ವಯ ಹಾಗೂ ಸಹಕಾರದ ಸಂದೇಶವನ್ನು ಸ್ಪಷ್ಟವಾಗಿ ರವಾನೆ ಮಾಡಿದ್ದಾರೆ. ಹಳೆಯದ್ದನ್ನು ಮರೆತು ಇತಿಹಾಸದ ಪುಟಗಳಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಬೇಕಿದೆ ಎಂದು ಚೀನಾ ರಾಯಭಾರಿ ಸಲಹೆ ನೀಡಿದ್ದಾರೆ.