ನಿವೃತ್ತ ಯೋಧ ಹಕ್ (ಟ್ವಿಟರ್ ಚಿತ್ರ)
ಗುವಾಹತಿ: ವಿಶ್ವದ ಬಲಾಢ್ಯ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು ಎಂದು ದೇಶದ ಪ್ರತಿಯೊಬ್ಬ ಭಾರತೀಯ ಕೂಡ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.. ಆದರೆ ಆ ಬಲಿಷ್ಠ ಸೇನೆಯಲ್ಲಿರುವ ಒಬ್ಬೊಬ್ಬ ಸೈನಿಕನ ಸ್ಥಿತಿಮಾತ್ರ ಕರುಣಾಜನಕವಾಗಿರುತ್ತದೆ.
ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಭಾರತೀಯ ಸೇನೆಯಲ್ಲಿ ಬರೊಬ್ಬರಿ 30 ವರ್ಷ ಸೇವೆಸಲ್ಲಿಸಿ ನಿವೃತ್ತಿಯಾದ ಯೋಧನೋರ್ವ ತನ್ನ ಭಾರತೀಯತೆಯನ್ನು ಸಾಬೀತು ಪಡಿಸುವ ಅನಿವಾರ್ಯತೆಗೆ ಸಿಲುಕಿದ್ದಾನೆ. ಮೂಲಗಳ ಪ್ರಕಾರ ಅಸ್ಸಾಂ ಮೂಲದ ಮೊಹಮದ್ ಅಜ್ಮಲ್ ಹಕ್ ಎಂಬ ನಿವೃತ್ತ ಸೇನಾಧಿಕಾರಿ ವಿರುದ್ಧ ಬಾಂಗ್ಲಾದೇಶದಿಂದ ಅಕ್ರಮ ವಲಸೆ ಬಂದಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಅಸ್ಸಾಂ ಪೊಲೀಸರು ದೂರು ದಾಖಲಿಸಿಕೊಂಡು ಮಾಜಿ ಸೇನಾಧಿಕಾರಿ ಇದೀಗ ತಾವು ಭಾರತೀಯ ಎಂಬುದನ್ನು ದೃಢಪಡಿಸಬೇಕು ಎಂದು ಸೂಚನೆ ನೀಡಿದ್ದಾರೆ.
ರಾಜಧಾನಿ ಗುವಾಹತಿಯಿಂದ 70 ಕಿ.ಮೀ ದೂರದ ಚಯ್ಯಾಗಾಂವ್‌ನಲ್ಲಿ ಮಾಜಿ ಸೇನಾಧಿಕಾರಿ ಹಕ್ ವಾಸವಾಗಿದ್ದು, ಕಳೆದ ವರ್ಷವಷ್ಟೇ ಸೇನೆಯ ಜ್ಯೂನಿಯರ್ ಕಮಿಷನರ್ ಆಫೀಸರ್ ಸೇವೆಯಿಂದ ನಿವೃತ್ತರಾಗಿದ್ದರು. 1986 ಸೆಪ್ಟೆಂಬರ್ ನಲ್ಲಿ ಹಕ್ ಮೆಕಾನಿಕಲ್ ಇಂಜಿನಿಯರ್ ಆಗಿ ಸೇನೆ ಸೇರ್ಪಡೆಯಾಗಿದ್ದರು. ಅಸ್ಸಾಂ ನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಹಾವಳಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹಲವರಿಗೆ ವಿದೇಶಿಯರ ನ್ಯಾಯಮಂಡಳಿ ಅಧಿಕಾರಿಗಳು ನೋಟಿಸ್ ನೀಡಿದ್ದು, ಈ ಪೈಕಿ ನಿವೃತ್ತ ಸೇನಾಧಿಕಾರಿ ಮೊಹದ್ ಅಜ್ಮಲ್ ಹಕ್ ಅವರಿಗೂ ನೋಟಿಸ್ ನೀಡಲಾಗಿದೆ. ಹಕ್ ಅವರನ್ನ ನಕಲಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದ್ದು, ತಾವು ಭಾರತೀಯ ಎಂಬುದನ್ನು ದೃಢಪಡಿಸಲು ದಾಖಲೆಗಳನ್ನು ನೀಡುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ. ಈ ಪ್ರಕರಣ ಸಂಬಂಧ ನ್ಯಾಯಮಂಡಳಿಯಲ್ಲಿ ಅಕ್ಟೋಬರ್ 13 ರಂದು ವಿಚಾರಣೆ ನಡೆಯಲಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಯೋಧ ಮೊಹಮದ್ ಅಜ್ಮಲ್ ಹಕ್ ಅವರು, "ದೇಶಕ್ಕಾಗಿ 30 ವರ್ಷ ಶ್ರಮಿಸಿದರೂ ನನಗೆ ಇಂಥಹ ಅವಮಾನ. ಇದರಿಂದ ನನಗೆ ತುಂಬಾ ದುಃಖವಾಗುತ್ತಿದ್ದು, ಹೃದಯ ಒಡೆದು ಹೋಗಿದೆ. ಒಂದು ವೇಳೆ ಅಕ್ರಮ ವಲಸೆಗಾರನಾಗಿದ್ದರೆ ಭಾರತೀಯ ಸೇನೆಯಲ್ಲಿ ಹೇಗೆ ಸೇವೆ ಸಲ್ಲಿಸುತ್ತಿದೆ. ತನ್ನ ಪತ್ನಿ ಮುಮ್ತಾಜ್ ಬೇಗಂ ಕೂಡ 2012ರಲ್ಲಿ ಇದೇ ಆರೋಪ ಎದುರಿಸಿದ್ದರು. ಆಗ ನಾವು ನಮ್ಮ ನಾಗರೀಕತ್ವ ದೃಢಪಡಿಸಲು ನ್ಯಾಯಮಂಡಳಿ ಕೋರ್ಟ್ ಮುಂದೆ ದಾಖಲೆಗಳನ್ನು ಹಾಜರುಪಡಿಸಿದ್ದೆವು. ಕೋರ್ಟ್ ಆಗ ನಾವು ಭಾರತೀಯರು ಎಂದು ತೀರ್ಪು ನೀಡಿತ್ತು" ಎಂದು ಮಾಜಿ ಸೇನಾಧಿಕಾರಿ ನೋವು ತೋಡಿಕೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos