ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದಾಖಲಿಸಿದ್ದ ಕ್ರಿಮಿನಲ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಇತರ ನಾಲ್ವರನ್ನು ಮಂಗಳವಾರ ಖುಲಾಸೆಗೊಳಿಸಿದೆ.
ಪ್ರಕರಣ ಇತ್ಯರ್ಥಪಡಿಸಿಕೊಳ್ಳುವುದಕ್ಕಾಗಿ ಅರುಣ್ ಜೇಟ್ಲಿ ಮತ್ತು ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಜಂಟಿ ಅರ್ಜಿಯನ್ನು ಪರಿಗಣಿಸಿದ ಹೆಚ್ಚುವರಿ ಚೀಫ್ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು, ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.
ಡಿಡಿಸಿಎ ಹಗರಣಕ್ಕೆ ಸಂಬಂಧಿಸಿದಂತೆ ಅರುಣ್ ಜೇಟ್ಲಿ ವಿರುದ್ಧ ತಾವು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಹಾಗೂ ಇತರೆ ಆಪ್ ನಾಯಕರಾದ ರಾಘವ್ ಚಡ್ಢಾ, ಸಂಜಯ್ ಸಿಂಗ್, ಆಶುತೋಷ್ ಮತ್ತು ದೀಪಕ್ ಬಾಜಪೇಯಿ ಅವರು ಕ್ಷಮೆ ಕೇಳಿದ್ದರು. ಅಲ್ಲದೆ ಈ ಸಂಬಂಧ ಕೇಜ್ರಿವಾಲ್ ಮತ್ತು ಜೇಟ್ಲಿ ಕೋರ್ಟ್ ಗೆ ಜಂಟಿ ಅರ್ಜಿ ಸಲ್ಲಿಸಿದ್ದರು.
2015 ರಲ್ಲಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ 5 ಆಪ್ ನಾಯಕರ ವಿರುದ್ಧ ಅರುಣ್ ಜೇಟ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅರುಣ್ ಜೇಟ್ಲಿ ಡಿಡಿಸಿಎ ಅಧ್ಯಕ್ಷರಾಗಿದ್ದಾಗ ಅಕ್ರಮ ನಡೆದಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಈಗಗಾಲೇ ಕ್ಷಮೆ ಕೋರಿದ್ದಾರೆ. ಆದರೆ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಆಪ್ ನಾಯಕ ಕುಮಾರ್ ವಿಶ್ವಾಸ್ ಕ್ಷಮೆ ಕೋರದ ಹಿನ್ನೆಲೆಯಲ್ಲಿ ಅವರ ವಿರುದ್ಧ ವಿಚಾರಣೆ ಮುಂದುವರೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics