ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ 1989 ಕಾಯ್ದೆಯ ಶಕ್ತಿಯನ್ನು ಹೆಚ್ಚಿಸಿದ್ದು ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮಂಗಳವಾರ ಹೇಳಿದ್ದಾರೆ.
ಎಸ್'ಸಿ/ಎಸ್'ಟಿ ಕಾಯ್ದೆ ವಿವಾದ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, 2015ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ 1989 ಕಾಯ್ದೆಯ ಶಕ್ತಿಯನ್ನು ಎನ್'ಡಿಎ ಸರ್ಕಾರ ಹೆಚ್ಚಿಸಿತ್ತು. ಎಸ್'ಸಿ ಮತ್ತು ಎಸ್'ಟಿ ಸಮುದಾಯಗಳ ಕಲ್ಯಾಣ ಕುರಿತಂತೆ ನಮಗಿರುವ ಬದ್ಧತೆಯಿಂದ ನಾವು ಇಂತಹ ನಿರ್ಧಾರಗಳನ್ನು ಕೈಗೊಂಡಿದ್ದೆವು ಹೇಳಿದ್ದಾರೆ.
ಬಳಿಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ದ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಅಂದು ಅಂಬೇಡ್ಕರ್ ಅವರನ್ನು ಒಂದಲ್ಲ ಎರಡು ಬಾರಿ ಸೋಲಿಸಿತ್ತು. ಕ್ಷುಲ್ಲಕ ಕಾರಣಗಳನ್ನು ನೀಡಿ ಕೇಂದ್ರದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಹಾಕದಂತೆ ಮಾಡಿತು. ಅಲ್ಲದೆ, ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ನಿರಾಕರಿಸಿತ್ತು. ಕಾಂಗ್ರೆಸ್ ಅವರ ಋಣಾತ್ಮಕ ರಾಜಕೀಯವನ್ನು ಭಾರತ ನೋಡಿದೆ ಎಂದು ತಿಳಿಸಿದ್ದಾರೆ.