ದೇಶ

ಪ್ರತ್ಯೇಕತಾವಾದಿಗಳ ಪ್ರತಿಭಟನೆ ವಿಫಲ; ಯುವಕನ ಹತ್ಯೆ ಸಂಬಂಧ ಓರ್ವ ಪೊಲೀಸ್ ಅಧಿಕಾರಿ ಬಂಧನ

Srinivas Rao BV
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಪ್ರತಿಭಟನಾ ಮೆರವಣಿಗೆಯನ್ನು ಸರ್ಕಾರ ವಿಫಲಗೊಳಿಸಿದೆ. 
ಕಣಿವೆ ರಾಜ್ಯದ ಪ್ರಮುಖ ಪ್ರದೇಶಗಳಲ್ಲಿ ನಿರ್ಬಂಧ ಹಾಗೂ ಪ್ರತ್ಯೇಕತಾವಾದಿಗಳ ಚಲನವಲನಗಳನ್ನು ತಡೆಹಿಡಿಯುವ ಮೂಲಕ ಸರ್ಕಾರ ಪ್ರತಿಭಟನಾ ಮೆರವಣಿಗೆಯನ್ನು ವಿಫಲಗೊಳಿಸಿದೆ. ಇದೇ ವೇಳೆ 20 ವರ್ಷದ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಮಧ್ಯ ಕಾಶ್ಮೀರದಲ್ಲಿ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದ್ದು, ಅಮಾನತು ಮಾಡಲಾಗಿದೆ. 
ನಾಗರಿಕರು ಹತ್ಯೆಯಾಗುವುದನ್ನು ಖಂಡಿಸಿ ಪ್ರತ್ಯೇಕತಾವಾದಿಗಳು ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಶೋಪಿಯಾನ್ ನಗರ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ನಿರ್ಬಂಧ ವಿಧಿಸಲಾಗಿತ್ತು.  ಭಾನುವಾರದಂದು ಭದ್ರತಾ ಸಿಬ್ಬಂದಿ ಹಾಗೂ ಭಯೋತ್ಪಾದಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ 13 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು, ಇದೇ ಘಟನೆಯಲ್ಲಿ ನಾಗರಿಕರೂ ಸಾವನ್ನಪ್ಪಿದ್ದರು. 
ಈ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದ ಪ್ರತ್ಯೇಕತಾವಾದಿ ಮುಖಂಡ ಸಯೀದ್ ಅಲಿ ಗಿಲಾನಿ, ತನ್ನ ಗೃಹ ಬಂಧನವನ್ನು ಮೀರಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಯತ್ನಿಸಿದ ಘಟನೆಯೂ ನಡೆದಿದೆ. ಆದರೆ ಗಿಲಾನಿಯನ್ನು ಮುಖ್ಯ ದ್ವಾರ ದಾಟದಂತೆ ಪೊಲೀಸರು ತಡೆದಿದ್ದಾರೆ. 
SCROLL FOR NEXT