ಶ್ರೀನಗರ: ವರ್ಷದ ಹಿಂದೆ ಕಾಶ್ಮೀರದಲ್ಲಿ ಸೈನಿಕರ ಮಾನವ ಗುರಾಣಿಯಾಗಿಸಿಕೊಂಡಿದ್ದ ಫಾರೂಕ್ ಅಹ್ಮದ್ ದಾರ್ ಎಂಬಾತನನ್ನು ಇದೀಗ ಆತನ ಗ್ರಾಮದಿಂದ ಬಹಿಷ್ಕರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವೊಂದು ಹರಿದಾಡುತ್ತಿತ್ತು. ಕಣಿವೆ ರಾಜ್ಯ ಕಾಶ್ಮೀರದಲ್ಲಿ ಸೈನಿಕರತ್ತ ಕಲ್ಲು ತೂರಾಟ ನಡೆಸುತ್ತಿದ್ದವರನ್ನು ಹಣಿಯಲು ಸೈನಿಕರು ಕಲ್ಲು ತೂರಾಟಗಾರರಲ್ಲಿ ಓರ್ವನನ್ನು ಹಿಡಿದು ತಮ್ಮ ಸೇನಾ ವಾಹನಕ್ಕೆ ಗುರಾಣಿಯಾಗಿ ಕಟ್ಟಿದ್ದರು. ಆ ಮೂಲಕ ಕಲ್ಲುತೂರಾಟಗಾರಿಗೆ ಎಚ್ಚರಿಕೆ ನೀಡಿದ್ದರು. ಬಳಿಕ ಈ ಸುದ್ದಿ ದೇಶ ಮಾತ್ರವಲ್ಲದೇ ವಿಶ್ವಾದ್ಯಂತ ಸುದ್ದಿಯಾಗಿ ವ್ಯಾಪಕ ಚರ್ಚಗೆ ಕಾರಣವಾಗಿತ್ತು.
ಇದೀಗ ಈ ಫಾರೂಕ್ ಅಹ್ಮದ್ ದಾರ್ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಸೇನೆ ತನ್ನನ್ನು ಮಾನವ ಗುರಾಣಿಯಾಗಿಸಿಕೊಂಡ ಬಳಿಕ ಸ್ಥಳೀಯ ಗ್ರಾಮಸ್ಥರು ತನ್ನನ್ನು ಸರ್ಕಾರದ ಏಜೆಂಟ್ ಎಂಬಂತೆ ನೋಡುತ್ತಿದ್ದು, ಯಾರೂ ಕೂಡ ನನಗೆ ಕೆಲಸ ನೀಡುತ್ತಿಲ್ಲ, ಕನಿಷ್ಛಪಕ್ಷ ದಿನಗೂಲಿಗೂ ಯಾರೂ ಕರೆಯುತ್ತಿಲ್ಲ ಎಂದು ತನ್ನ ಅಳಲು ತೋಡಿಕೊಂಡಿದ್ದಾನೆ. ಇದೇ ಚಿಂತೆಯಿಂದಾಗಿ ತಾನು ಇನ್ಸೋಮೇನಿಯಾ (ನಿದ್ರಾಹೀನತೆ) ಮತ್ತು ಖಿನ್ನತೆಯಿಂದ ಬಳಲುತ್ತಿದ್ದು, ಕನಿಷ್ಠ ತನ್ನ ಆರೋಗ್ಯದ ಚಿಕಿತ್ಸಾ ವೆಚ್ಚಕಾಗುವಷ್ಟೂ ದುಡಿಯಲೂ ಸಾಧ್ಯವಾಗುತ್ತಿಲ್ಲ ಎಂದು ಫಾರೂಕ್ ಅಹ್ಮದ್ ದಾರ್ ಹೇಳಿಕೊಂಡಿದ್ದಾನೆ.
ಅಂದು ಶ್ರೀನಗರದಲ್ಲಿ ಲೋಕಸಭಾ ಚುನಾವಣೆ ಇದ್ದುದರಿಂದ ಅಂದು ನಾನು ನನ್ನ ಮತ ಚಲಾಯಿಸಲು ಹೋಗಿದ್ದೆ. ಪ್ರತ್ಯೇಕತಾವಾದಿಗಳು ಮತದಾನ ಬಹಿಷ್ಕರಿಸಿದ್ದರು. ಆದರೂ ಅವರ ಬಹಿಷ್ಕಾರದ ಹೊರತಾಗಿಯೂ ನನ್ನ ಹಕ್ಕು ಚಲಾಯಿಸಲು ನಾನು ಹೋಗಿದ್ದೆ. ಆದರೆ ನನ್ನನ್ನು ಸೇನಾಧಿಕಾರಿಗಳು ಕಲ್ಲು ತೂರಾಟಗಾರ ಎಂದು ಆರೋಪಿಸಿ ತನ್ನನ್ನು ಬಂಧಿಸಿ ತಮ್ಮ ಕಾರಿಗೆ ಗುರಾಣಿಯಾಗಿ ಕಟ್ಟಿದರು. ಈ ಘಟನೆ ಬಳಿಕ ತನ್ನ ಜೀವನ ನರಕವಾಗಿ ಮಾರ್ಪಟ್ಟಿದ್ದು, ತನ್ನನ್ನು ಸರ್ಕಾರದ ಏಜೆಂಟ್ ಎಂದು ಸ್ಥಳೀಯರು ದೂಷಣೆ ಮಾಡುತ್ತಿದ್ದಾರೆ. ಅಲ್ಲದೆ ನನ್ನನು ಗ್ರಾಮದಿಂದ ಬಹಿಷ್ಕರಿಸಿದ್ದು, ಯಾರೂ ಕೂಡ ನನಗೆ ಸಹಾಯ ಮಾಡುತ್ತಿಲ್ಲ. ನಾನು ಮಾಡಿದ ತಪ್ಪಾದರೂ ಏನು ಎಂದು ದಾರ್ ಪ್ರಶ್ನೆ ಮಾಡಿದ್ದಾನೆ.