ಸೂರತ್: ಉತ್ತರ ಪ್ರದೇಶ ಉನ್ನಾವ್ ಮತ್ತು ಕಾಶ್ಮೀರದ ಕಥುವಾ ಅತ್ಯಾಚಾರ ಪ್ರಕರಣಗಳು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಬೆನ್ನಲ್ಲೇ ಇಂತಹುದೇ ಮತ್ತೊಂದು ಪ್ರಕರಣ ಪ್ರಧಾನಿ ಮೋದಿ ತವರು ಗುಜರಾತ್ ನಲ್ಲಿ ಬೆಳಕಿಗೆ ಬಂದಿದೆ.
ಗುಜರಾತ್ ಸೂರತ್ ನಗರದಲ್ಲಿ 11 ವರ್ಷದ ಬಾಲಕಿ ಶವ ಪತ್ತೆಯಾಗಿದ್ದು, ಬಾಲಕಿ ದೇಹದ ಮೇಲೆ ಬರೊಬ್ಬರಿ 86 ಗಾಯದ ಗುರುತುಗಳಿದ್ದು, ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಬಾಲಕಿಯನ್ನು ಕೊಲ್ಲುವುದಕ್ಕೂ ಒಂದು ಮುಂಚಿತವಾಗಿ ಆಕೆಯ ಮೇಲೆ ದೈಹಿಕ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.
ಅಲ್ಲದೆ ಬಾಲಕಿಯ ಗುಪ್ತಾಂಗಳಿಗೂ ಗಂಭೀರ ಹಾನಿಯಾಗಿದ್ದು, ಆಕೆಯ ಮೇಲೆ ಅತ್ಯಾಚಾರವಾಗಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಿವಿಲ್ ಆಸ್ಪತ್ರೆಯ ವಿಧಿವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥ ಗಣೇಶ್ ಗೊವೇಕರ್ ಅವರು, ಬಾಲಕಿಯ ದೇಹದಲ್ಲಿ ಸುಮಾರು 86 ಗಾಯಗಳು ಪತ್ತೆಯಾಗಿದ್ದು, ಬಹುತೇಕ ಗಾಯಗಳು ಒಂದು ವಾರದ ಹಳೆಯ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
ಸೂರತ್ ಹೊರವಲಯದ ಭೆಸ್ತಾನ್ ಪ್ರದೇಶದ ನಿರ್ಜನ ಪ್ರದೇಶದಲ್ಲಿ ಬಾಲಕಿ ದೇಹ ಪತ್ತೆಯಾಗಿದ್ದು, ಇಲ್ಲಿಗೆ ಬೆಳಗ್ಗೆ ವಾಕಿಂಗ್ ಬಂದ ಜನ ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ದಾಖಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಲಕಿಯ ಗುರುತು ಇನ್ನೂ ಪತ್ತೆಯಾಗಿಲ್ಲ.