ತಿರುವನಂತಪುರ: ರಾಷ್ಟ್ರಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಕಥುವಾ ಅತ್ಯಾಚಾರ ಪ್ರಕರಣದಿಂದಾಗಿ ಕೇರಳದ ನಿವಾಸಿಗಳು ಬಿಜೆಪಿ ಕಾರ್ಯಕರ್ತರು ಮನೆಯೊಳಗೆ ಪ್ರವೇಶಿಸುವುದನ್ನು ನಿಷೇಧಿಸಿದ್ದಾರೆ. ತಿರುವನಂತಪುರಂ ಜಿಲ್ಲೆಯ ವಾಮನಪುರಂ ಸಮೀಪದ ಕಲಮಾಚಲ್ ಎಂಬ ಗ್ರಾಮದಲ್ಲಿವ ಸುಮಾರು 20 ಮನೆಗಳಲ್ಲಿ ಬಿಜೆಪಿ ಕಾರ್ಯಕರ್ತರಿಗೆ ನಿಷೇಧ ಹೇರಲಾಗಿದೆ.
ಕೇರಳದ ಚೆಂಗನ್ನೂರ್ ನಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಚುನಾವಣಾ ಪ್ರಚಾರಕ್ಕೆ ಬರುವ ಬಿಜೆಪಿ ಕಾರ್ಯಕರ್ತರನ್ನು ಮನೆಯೊಳಗೆ ಪ್ರವೇಶಿಸಲು ಬಿಡುತ್ತಿಲ್ಲ. ಕಲಮಾಚಲದಲ್ಲಿರುವ ಸಿಪಿಎಂ ಕಾರ್ಯಕರ್ತರು ಮೊದಲಿಗೆ ಈ ರೀತಿಯ ಪ್ರತಿಭಟನೆ ಆರಂಭಿಸಿದ್ದಾರೆ. ಮನೆಯಲ್ಲಿ ಚಿಕ್ಕ ಚಿಕ್ಕ ಹೆಣ್ಣು ಮಕ್ಕಳಿವೆ, ಸಂಘಿಗಳಿಗೆ ಈ ಮನೆಯ ಪ್ರವೇಶವಿಲ್ಲ ಎಂಬ ಮುದ್ರಿಸಿದ ಪೋಸ್ಟರ್ ಹಾಕಲಾಗಿದೆ.
ಕಥುವಾ ಪ್ರಕರಣವನ್ನು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮಾನಂ ರಾಜಶೇಖರ್ ಖಂಡಿಸಿದ್ದಾರೆ. ಮಾನವೀಯತೆಯುಳ್ಳ ಯಾವುದೇ ವ್ಯಕ್ತಿ ಇದನ್ನು ಸಹಿಸಿಕೊಳ್ಳುವುದಿಲ್ಲ, ಅಂಥವರನ್ನು ಸಮಾಜ ದೂರ ಇಡಬೇಕು, ಜಮ್ಮು ಮತ್ತು ಕಾಶ್ಮೀರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಪ ಆವರು ಆಗ್ರಹಿಸಿದ್ದಾರೆ,
ಇನ್ನೂ ಕೇರಳ ಸಿಎಂ ಪಿಣರಾಯಿ ವಿಜಯನ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಸಂತ್ರಸ್ತ ಬಾಲಕಿಯ ಫೋಟೋ ಪೋಸ್ಟ್ ಮಾಡಿರುವುದನ್ನು ಟೀಕಿಸಿರುವ ಅವರು, ಸಿಎಂ ಪಿಣರಾಯ್ ಕಾನೂನನ್ನು ಉಲ್ಲಂಘಿಸಿ ಪ್ರಕರಣಕ್ಕೆ ರಾಜಕೀಯ ಹಚ್ಚಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.