ದೇಶ

ಕಥುವಾ ಅತ್ಯಾಚಾರ ಪ್ರಕರಣ: ಬಿಜೆಪಿ ಸಚಿವರ ರಾಜಿನಾಮೆ ಅಂಗೀಕರಿಸಿದ ಸಿಎಂ ಮುಫ್ತಿ

Lingaraj Badiger
ಶ್ರೀನಗರ: ಕಥುವಾ ಅತ್ಯಾಚಾರ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಆರೋಪಿಗಳ ಪರವಾಗಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ್ದ ಇಬ್ಬರು ಬಿಜೆಪಿ ಸಚಿವರ ರಾಜಿನಾಮೆಯನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಭಾನುವಾರ ಅಂಗೀಕರಿಸಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಸತ್ ಶರ್ಮಾ ಅವರು ವಿವಾದಾತ್ಮಕ ಸಚಿವರಾದ ಲಾಲ್ ಸಿಂಗ್ ಮತ್ತು ಚಂದರ್ ಪ್ರಕಾಶ್ ಗಂಗಾ ಅವರಿಂದ ಇಂದು ಬೆಳಗ್ಗೆ ರಾಜಿನಾಮೆ ಪಡೆದಿದ್ದರು. ಬಳಿಕ ಸಚಿವರ ರಾಜಿನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದರು. ಮುಫ್ತಿ ಅವರು ತಕ್ಷಣವೇ ಅದನ್ನು ರಾಜ್ಯಪಾಲ ಎನ್ ಎನ್ ವೊಹ್ರಾ ಅವರ ಅಂಗೀಕಾರಕ್ಕೆ ಕಳುಹಿಸಿದ್ದಾರೆ. 
ಇಬ್ಬರು ಸಚಿವರ ರಾಜಿನಾಮೆಯಿಂದಾಗಿ ಕಣಿವೆ ರಾಜ್ಯದ ಸಚಿವರ ಸಂಖ್ಯೆ 22ಕ್ಕೆ ಇಳಿದಿದೆ.
8 ವರ್ಷದ ಬಾಲಕಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಥುವಾ ದೇವಸ್ಥಾನದ ಪೂಜಾರಿಯ ಸಂಬಂಧಿಯನ್ನು ಬಂಧಿಸಿದ ನಂತರ ಮಾರ್ಚ್ 1ರಂದು ಅತ್ಯಾಚಾರ ಆರೋಪಿಗಳ ಪರವಾಗಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಈ ಇಬ್ಬರು ಸಚಿವರು ಭಾಗವಹಿಸಿದ್ದರು. ಸಚಿವರ ಈ ನಡೆಗೆ ಪ್ರತಿಪಕ್ಷಗಳಿಂದ ಮತ್ತು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
SCROLL FOR NEXT