ನವದೆಹಲಿ: ಕೇಸರಿ ಭಯೋತ್ಪಾದನೆ ಪದವನ್ನು ತಮ್ಮ ಮುಖಂಡರು ಎಲ್ಲಿಯೂ ಬಳಸಿಲ್ಲ. ಭಯೋತ್ಪಾದನೆಯನ್ನು ಯಾವುದೇ ಧರ್ಮಕ್ಕೆ ತಳುಕು ಹಾಕುವಂತಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಬಹುಸಂಖ್ಯಾತ ಸಮುದಾಯಕ್ಕೆ ಮಸಿ ಬಳಿಯಲು ಕಾಂಗ್ರೆಸ್ ಕೇಸರಿ ಭಯೋತ್ಪಾದನೆ ಎಂಬ ಪದವನ್ನು ಸೃಷ್ಟಿಸಿದೆ ಎಂದು ಬಿಜೆಪಿ ಆರೋಪಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಸ್ಫಷ್ಟನೆ ನೀಡಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಥವಾ ಬೇರೆ ಯಾವ ಕಾಂಗ್ರೆಸ್ ನಾಯಕನು ಕೇಸರಿ ಭಯೋತ್ಪಾದನೆ ಎಂಬ ಪದ ಬಳಸಿದ ವಿಡಿಯೋ ಅಥವಾ ಧ್ವನಿ ಸುರುಳಿ ಇದ್ದರೆ ತೋರಿಸಿ. ಕೇಸರಿ ಭಯೋತ್ಪಾದನೆ ಎಂಬುದು ಇಲ್ಲವೇ ಇಲ್ಲ ಎಂದು ಎಐಸಿಸಿ ವಕ್ತಾರ ಪಿಎಲ್ ಪುನಿಯಾ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ರಾಜ್ಯಸಭೆಯಲ್ಲಿ ಎನ್ಐಎ ಕಾರ್ಯವೈಖರಿಯನ್ನು ಪ್ರಶ್ನಿಸಿದರು. ನಾಲ್ಕು ವರ್ಷಗಳ ಹಿಂದೆ ಹೊಸ ಸರ್ಕಾರ ರಚನೆಯಾದ ಬಳಿಕ ಸಾಲು ಸಾಲಾಗಿ ಎಲ್ಲ ಪ್ರಕರಣಗಳಲ್ಲೂ ಆರೋಪಿಗಳ ಖುಲಾಸೆ ಆಗುತ್ತಿದೆ. ಹೀಗಾದರೆ ಇಂತಹ ತನಿಖಾ ಸಂಸ್ಥೆಗಳ ಬಗ್ಗೆ ಜನತೆ ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.