ಜೋಧ್ ಪುರ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪುನ್ನು ಆರೋಪಿ ಇರುವ ಜೈಲಿನಲ್ಲೇ ಪ್ರಕಟಿಸಲು ರಾಜ್ಯಸ್ಥಾನ ಹೈಕೋರ್ಟ್ ಮಂಗಳವಾರ ಒಪ್ಪಿಗೆ ಸೂಚಿಸದೆ.
ಎಸ್ಸಿ/ಎಸ್ಟಿ ವಿಶೇಷ ಕೋರ್ಟ್ ಕಳೆದ ಶನಿವಾರ ಅಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಏಪ್ರಿಲ್ 25ಕ್ಕೆ ತೀರ್ಪು ಕಾಯ್ದಿರಿಸಿದೆ. ಆದರೆ ತೀರ್ಪು ಕೋರ್ಟ್ ನಲ್ಲಿ ಪ್ರಕಟಿಸಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದ್ದು, ತೀರ್ಪುನ್ನು ಆರೋಪಿ ಇರುವ ಜೋಧ್ ಪುರ ಸೆಂಟ್ರಲ್ ಜೈಲಿನ ಆವರಣದಲ್ಲಿಯೇ ಪ್ರಕಟಿಸಲು ಅನುಮತಿ ನೀಡಬೇಕು ಎಂದು ಕೋರಿ ರಾಜಸ್ಥಾನ ಪೊಲೀಸರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಜೈಲಿನ ಆವರಣದಲ್ಲಿಯೇ ಅಂತಿಮ ತೀರ್ಪು ಪ್ರಕಟಿಸುವಂತೆ ಎಸ್ಸಿ/ಎಸ್ಟಿ ವಿಶೇಷ ಕೋರ್ಟ್ ನ್ಯಾಯಾಧೀಶ ಮಧುಸುದನ್ ಶರ್ಮಾ ಅವರಿಗೆ ನಿರ್ದೇಶನ ನೀಡಿದೆ. ಅಲ್ಲದೆ ಆರೋಪಿಯ ಬೆಂಬಲಿಗರು ಯಾವುದೇ ಅಹಿತಕರ ಘಟನೆ ನಡೆಸದಂತೆ ಸೂಕ್ತ ಭದ್ರತೆ ಒದಗಿಸುವಂತೆ ಜೋಧ್ ಪುರ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದೆ.
ಆಶ್ರಮದಲ್ಲಿ ಅಸಾರಾಂ ಬಾಪು ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿ 16 ವರ್ಷದ ವಿದ್ಯಾರ್ಥಿನಿ ಸ್ವಯಂ ಘೋಷಿತ ದೇವಮಾನವನ ವಿರುದ್ಧ ಕೇಸ್ ದಾಖಲಿಸಿದ್ದಳು.
ಈ ಪ್ರಕರಣ ಸಂಬಂಧ ಜೋಧಪುರ ಪೊಲೀಸರು ಅಸಾರಾಂ ಬಾಪು ಅವರನ್ನು 2013ರ ಆಗಸ್ಟ್ 31ರಂದು ಬಂಧಿಸಿದ್ದು, ಅಂದಿನಿಂದಲೂ ಅವರು ಜೈಲಿನಲ್ಲಿದ್ದಾರೆ.
ಅಸಾರಾಂ ಬಾಪು ವಿರುದ್ಧದ ಅತ್ಯಾಚಾರ ಆರೋಪ ಸಾಬೀತಾದರೆ ಗರಿಷ್ಠ 10 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.