ನವದೆಹಲಿ: ಭಾರತದಿಂದ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ತೆರಳಿ ಬಳಿಕ ಎನ್ ಜಿಒ ಗಳ ಸಹಾಯದಿಂದ ಭಾರತಕ್ಕೆ ವಾಪಸ್ ಆಗಿದ್ದ ಮೂಕ ಮತ್ತು ಕಿವುಡ ಯುವತಿ ಗೀತಾಗೆ ಇದೀಗ 20ಕ್ಕೂ ಹೆಚ್ಚು ಮದುವೆ ಪ್ರಪೋಸಲ್ ಗಳು ಬಂದಿವೆಯಂತೆ.
ಹೌದು..ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಗೀತಾಳನ್ನು ಮದುವೆಯಾಗಲು 20ಕ್ಕೂ ಹೆಚ್ಚು ಮಂದಿ ಯುವಕರು ಉತ್ಸುಕತೆ ತೋರಿದ್ದಾರೆ. ಗೀತಾಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಸಾಮಾಜಿಕ ಕಾರ್ಯಕರ್ತ ಜ್ಞಾನೇಂದ್ರ ಪುರೋಹಿತ್ ಅವರು, ಗೀತಾಳ ವಿವಾಹಕ್ಕೆ ಮುಂದಾಗಿದ್ದು, ಈ ಸಂಬಂಧ ವರರ ಶೋಧದಲ್ಲಿ ತೊಡಗಿದ್ದಾರೆ. ಇದೇ ವಿಚಾರವಾಗಿ ಜ್ಞಾನೇಂದ್ರ ಪುರೋಹಿತ್ 9 ದಿನಗಳ ಹಿಂದೆ ಗೀತಾಳ ಫೋಟೋವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಗೀತಾಳ ವಿವಾಹ ಸಂಬಂಧ ವರರ ಬಯೋಡೇಟಾ ಕೇಳಿದ್ದರು.
ಇದೀಗ ಗೀತಾಳನ್ನು ವಿವಾಹವಾಗಲು ಸುಮಾರು 20ಕ್ಕೂ ಹೆಚ್ಚು ಮಂದಿ ಯುವಕರು ಉತ್ಸುಕತೆ ತೋರಿದ್ದು, ಈ 20 ಮಂದಿಯ ಪಟ್ಟಿಯಲ್ಲಿ 12 ಮಂದಿ ಯುವಕರು ದೈಹಿಕ ಅಂಗವಿಕಲತೆ ಹೊಂದಿದ್ದು, ಉಳಿದ 8 ಮಂದಿ ಯುವಕರು ಯಾವುದೇ ರೀತಿಯ ಅಂಗ ವಿಕಲತೆ ಹೊಂದಿಲ್ಲ. ಇನ್ನು ಗೀತಾಳ ವರಿಸಲು ಮುಂದೆ ಬಂದಿರುವ ವರರಲ್ಲಿ ಉದ್ಯಮಿಗಳು, ಸಾಹಿತಿ, ಮತ್ತು ಓರ್ವ ದೇವಸ್ಥಾನದ ಅರ್ಚಕರು ಕೂಡ ಇದ್ದಾರಂತೆ.
ಇನ್ನು ಪಾಕಿಸ್ತಾನದಿಂದ ಗೀತಾಳನ್ನು ಭಾರತಕ್ಕೆ ಕರೆತಂದಿದ್ದ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಗೀತಾಗೆ ಉತ್ತಮ ವರನನ್ನು ಹುಡುಕುವಂತೆ ಜ್ಞಾನೇಂದ್ರ ಪುರೋಹಿತ್ ಅವರಿಗೆ ತಿಳಿಸಿದ್ದರು. ಅದರಂತೆ ಜ್ಞಾನೇಂದ್ರ ಪುರೋಹಿತ್ ವರನ ಹುಡುಕಾಟದಲ್ಲಿ ತೊಡಗಿದ್ದಾರೆ. ಪ್ರಸ್ತುತ ಗೀತಾ ಮುಕ್-ಬಧೀರ್ ಸಂಗಥನ್ ಎನ್ ಜಿಒ ಆಶ್ರಯದಲ್ಲಿದ್ದಾರೆ.
ಗೀತಾ 7 ವರ್ಷದವಳಾಗಿದ್ದಾಗ ಆಕೆ ಭಾರತದಿಂದ ಆಕಸ್ಮಿಕವಾಗಿ ಸಂಜೋತಾ ಎಕ್ಸ್ ಪ್ರೆಸ್ ರೈಲಿನಲ್ಲಿ ಲಾಹೋರ್ ಗೆ ತೆರಳಿದ್ದಳು. ಅನಾಥಳಾಗಿದ್ದ ಗೀತಾಳಿಗೆ ಕರಾಚಿ ಮೂಲದ ಈಧಿ ಫೌಂಡೇಷನ್ ಸಂಸ್ಥೆ ಆಶ್ರಯ ನೀಡಿತ್ತು. ಅಂದಿನಿಂದಲೂ ಸತತವಾಗಿ ಗೀತಾಳ ಪೋಷಕರಿಗಾಗಿ ಈಧಿ ಫೌಂಡೇಶನ್ ಹುಡುಕಾಟ ನಡೆಸಿತ್ತು, 2015ರಲ್ಲಿ ಗೀತಾಳನ್ನು ಭಾರತಕ್ಕೆ ವಾಪಸ್ ಕರೆತರಲಾಗಿತ್ತು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಖುದ್ಧು ಗೀತಾಳನ್ನು ಬರ ಮಾಡಿಕೊಂಡಿದ್ದರು.