ನವದೆಹಲಿ:ವೈದ್ಯರ ಬಗ್ಗೆ ಲಂಡನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಗೆ ಅಖಿಲ ಭಾರತೀಯ ವೈದ್ಯರ ಸಂಘಟನೆ ಅಸಮಾಧಾನ ವ್ಯಕ್ತಪಡಿಸಿ ಪ್ರಧಾನಿಗೆ ಪತ್ರ ಬರೆದಿದೆ.
ಲಂಡನ್ ನಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ವೈದ್ಯರ ತಪ್ಪು ಕೆಲಸಗಳನ್ನು ಎತ್ತಿ ತೋರಿಸಿದ್ದರು. ಅಷ್ಟೇ ಅಲ್ಲದೇ ಔಷಧೀಯ ಸಂಸ್ಥೆಗಳಿಗೆ ಉತ್ತೇಜನ ನೀಡುವುದಕ್ಕಾಗಿ ಕಾನ್ಫರೆನ್ಸ್ ಗಳಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಿದ್ದರು.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವೈದ್ಯರ ಸಂಘಟನೆ, ನಿಮ್ಮ ಹೇಳಿಕೆಯಿಂದ ತೀವ್ರವಾದ ನೋವುಂಟಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ನಿಮ್ಮ ಹೇಳಿಕೆ ವೈದ್ಯರು ಹಾಗೂ ರೋಗಿಯ ನಡುವೆ ಇರುವ ನಂಬಿಕೆಯ ಸಂಬಂಧವನ್ನು ಸರಿ ಮಾಡಲಾಗದಂತೆ ಹಾನಿಗೊಳಿಸಿದೆ.
ಆದರೆ ರೋಗಿಯ ಚೇತರಿಕೆಗೆ ಕಾರಣವಾಗುವ ನಂಬಿಕೆಯನ್ನು ನೀವು ಪುನಃ ವಪಸ್ ಬರುವಂತೆ ಮಾಡುಬಹುದೆಂಬ ವಿಶ್ವಾಸವಿದೆ ಎಂದು ವೈದ್ಯರು ಹೇಳಿದ್ದಾರೆ. ಪ್ರಧಾನಿ ಹೇಳಿಕೆ ಬಗ್ಗೆ ಅಸಮಾಧಾನ ಹೊರಹಾಕಿರುವ ಡಾ.ರವಿ ವಾಂಖೇಡ್ಕರ್, ನರೇಂದ್ರ ಮೋದಿ ಅವರು ಭಾರತೀಯ ವೈದ್ಯರ ಬಗ್ಗೆ ನೀಡಿರುವ ಹೇಳಿಕೆಯಿಂದ ನಮಗೆ ನೋವಾಗಿದೆ. ಔಷಧಗಳ ಖರ್ಚಿನಂತಹ ವಿಷಯಗಳು ಸರ್ಕಾರದ ಕೈಯಲ್ಲಿದೆ, ಆದ್ದರಿಂದ ಪ್ರಧಾನಿ ತಮ್ಮ ಹೇಳಿಕೆಯನ್ನು ಮರುಪರಿಶೀಲಿಸಬೇಕೆಂದು ನಿರೀಕ್ಷಿಸುತ್ತೇವೆ ಎಂದು ವಾಂಖೇಡ್ಕರ್ ಹೇಳಿದ್ದಾರೆ.