ದೇಶ

ಮಹಾಭಿಯೋಗ ನಿಲುವಳಿ ಸೂಚನೆ ತಿರಸ್ಕಾರ: ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ: ಕಾಂಗ್ರೆಸ್

Srinivasamurthy VN
ನವದೆಹಲಿ: ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧದ ಮಹಾಭಿಯೋಗ ನಿಲುವಳಿ ಸೂಚನೆಯನ್ನು ಸಭಾಪತಿ ವೆಂಕಯ್ಯ ನಾಯ್ಡು ತಿರಸ್ಕರಿಸಿದ ಬೆನ್ನಲ್ಲೇ, ಈ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.
ಇಂದು ಬೆಳಗ್ಗೆಯಷ್ಟೇ ಪ್ರಮುಖ ವಿಪಕ್ಷ ಕಾಂಗ್ರೆಸ್ ನೇತೃತ್ವದಲ್ಲಿ ಸಲ್ಲಿಕ ಮಾಡಲಾಗಿದ್ದ ಸಿಜೆಐ ದೀಪಕ್ ಮಿಶ್ರಾ ಮಹಾಭಿಯೋಗ ನಿಲುವಳಿ ಸೂಚನೆಯನ್ನು ರಾಜ್ಯಸಭೆ ಸಭಾಪತಿ ವೆಂಕಯ್ಯನಾಯ್ಡು ತಿರಸ್ಕರಿಸಿದ್ದರು. ವಿಪಕ್ಷಗಳು ಸಲ್ಲಿಕೆ ಮಾಡಿದ್ದ ಮಹಾಭಿಯೋಗ ನಿಲುವಳಿ ಸೂಚನೆಯಲ್ಲಿ ವಿಪಕ್ಷಗಳು ಮಂಡಿಸಿರುವ ಅಂಶಗಳು ಪೂರಕವಾಗಿರದ ಕಾರಣ ನಿಲುವಳಿ ಸೂಚನೆಯನ್ನು ತಿರಸ್ಕರಿಸಲಾಗಿದೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದರು.
ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ನಿರ್ಧಿಷ್ಟವಾಗಿ ಸಭಾಪತಿ ವೆಂಕಯ್ಯ ನಾಯ್ಡು ಅವರು ಯಾವ ಕಾರಣಕ್ಕೆ ಮಹಾಭಿಯೋಗ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿಲ್ಲ. ಆದರೆ ಈ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕಾಂಗ್ರೆಸ್ ಮುಖಂಡ ಪಿಎಲ್ ಪುನಿಯಾ, ಇದು ನಿಜಕ್ಕೂ ಪ್ರಮುಖ ವಿಚಾರವಾಗಿದೆ. ಆದರೆ ನಮಗೆ ಅರ್ಜಿ ತಿರಸ್ಕಾರಗೊಳ್ಳಲು ಕಾರಣವೇನು ಎಂದು ತಿಳಿದಿಲ್ಲ. ಕಾಂಗ್ರೆಸ್ ಪಕ್ಷ ಕಾನೂನು ತಜ್ಞರ ಅಭಿಪ್ರಾಯಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. 
ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಸಹೋದ್ಯೋಗಿ ನ್ಯಾಯಾಧೀಶರೇ ತಾರತಮ್ಯ ಆರೋಪ ಮಾಡಿದ ಬೆನ್ನಲ್ಲೇ ಸಿಜೆಐ ಪದಚ್ಯುತಿಗೆ ವಿಪಕ್ಷಗಳು ಸಂಸತ್ ನ ಉಭಯ ಕಲಾಪದಲ್ಲಿ ನಿಲುವಳಿ ನೋಟಿಸ್ ನೀಡಿದ್ದವು. ಪ್ರಮುಖ ವಿಪಕ್ಷ ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯಸಭೆ ಸಭಾಧ್ಯಕ್ಷ ಮತ್ತು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ಪದಚ್ಯುತಿ ನಿಲುವಳಿ ನೋಟಿಸ್ ನೀಡಲಾಗಿತ್ತು. 
ಇನ್ನು ಭಾರತೀಯ ಸಂವಿಧಾನದ ಅನುಚ್ಛೇಧ 124ರ ಅಡಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮತ್ತು ಅನುಚ್ಛೇಧ 128ರ ಅಡಿಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಪದಚ್ಯುತಿಗೊಳಿಸುವ ಅವಕಾಶವಿದೆ.
SCROLL FOR NEXT