ಶೌಚಾಲಯ ನಿರ್ಮಾಣ ಆಗಿದೆಯೋ ಇಲ್ಲವೋ?: ಯೋಗಿ ಆದಿತ್ಯನಾಥ್ ಪ್ರಶ್ನೆಗೆ ಗ್ರಾಮಸ್ಥರಿಂದ ’ಇಲ್ಲ’ ಎಂಬ ಒಕ್ಕೊರಲಿನ ಉತ್ತರ!
ಸರ್ಕಾರದ ವಿವಿಧ ಯೋಜನೆಗಳು ಜನರಿಗೆ ತಲುಪುತ್ತಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯದ ಕಂಧಿಯಾಪುರ್, ಮಧುಪುರ್ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ.
ಪ್ರತಾಪ್ಗಡ್: ಸರ್ಕಾರದ ವಿವಿಧ ಯೋಜನೆಗಳು ಜನರಿಗೆ ತಲುಪುತ್ತಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯದ ಕಂಧಿಯಾಪುರ್, ಮಧುಪುರ್ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಗ್ರಾಮಸ್ಥರು ನೀಡಿದ ಉತ್ತರ ಮುಖ್ಯಮಂತ್ರಿಗಳಿಗೆ ಮುಜುಗರ ಉಂಟುಮಾಡುವಂತಿತ್ತು.
ಗ್ರಾಮ ಸ್ವರಾಜ್ಯ ಯೋಜನೆಯ ಅಡಿಯಲ್ಲಿ ಉತ್ತರ ಪ್ರದೇಶ ರಾಜ್ಯ ಸರ್ಕಾರ 50,000 ಗ್ರಾಮಗಳನ್ನು ತಲುಪುವ ಉದ್ದೇಶ ಹೊಂದಿದೆ. ಯೋಜನೆಯ ಭಾಗವಾಗಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸುತ್ತಿದ್ದ ವೇಳೆ ಯೋಗಿ ಆದಿತ್ಯನಾಥ್ ಗ್ರಾಮಸ್ಥರನ್ನು ಇಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸುತ್ತಿದ್ದ ಗ್ರಾಮಸ್ಥರು ಒಕ್ಕೊರಲಿನಿಂದ ಇಲ್ಲ, ಒಂದೇ ಒಂದೂ ನಿರ್ಮಾಣವಾಗಿಲ್ಲ ಎಂದು ಜೋರಾಗಿ ಹೇಳಿದ್ದಾರೆ.
ಗ್ರಾಮಸ್ಥರ ಉತ್ತರವನ್ನು ಕೇಳಿದ ಯೋಗಿ ಆದಿತ್ಯನಾಥ್, ತಕ್ಷಣವೇ ಸ್ಥಳೀಯ ಅಧಿಕಾರಿಗಳನ್ನು ಕರೆಯಿಸಿ, ಶೌಚಾಲಯ ನಿರ್ಮಾಣಕ್ಕಾಗಿ 24 ಗಂಟೆಗಳಲ್ಲಿ ಹಣ ಬಿಡುಗಡೆ ಮಾಡಬೇಕೆಂದು ಆದೇಶ ನೀಡಿದ್ದಾರೆ. ಅಷ್ಟೇ ಅಲ್ಲದೇ ಪ್ರತಿಯೊಬ್ಬ ಗ್ರಾಮಸ್ಥನ ಬಳಿಯೂ ಪಡಿತರ ಚೀಟಿ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ತಿಳಿಸಿದ್ದಾರೆ.
ಇದಾದ ಬಳಿಕ ದಲಿತರ ಮನೆಯಲ್ಲಿ ಯೋಗಿ ಆದಿತ್ಯನಾಥ್ ರಾತ್ರಿಯ ಭೋಜನ ಸೇವಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.