ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಡದಲ್ಲಿರುವಂತೆ ಕಾಣಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಯಾವುದೇ 'ಅಜೆಂಡಾ ಇಲ್ಲ'ದ ಚೀನಾ ಭೇಟಿ ಬಗ್ಗೆ ಶುಕ್ರವಾರ ವ್ಯಂಗ್ಯವಾಡಿದ್ದಾರೆ.
ನಿಮ್ಮ ಚೀನಾ ಭೇಟಿಗೆ ಯಾವುದೇ ಅಂಜಂಡ ಇಲ್ಲದಿದ್ದರೂ ನಾನು ಡೋಕ್ಲಮ್ ವಿವಾದ ಮತ್ತು ಚೀನಾ - ಪಾಕಿಸ್ತಾನ ಆರ್ಥಿಕ ಕಾರಿಡಾರ್ ಬಗ್ಗೆ ನಿಮಗೆ ನೆನಪಿಸುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
'ಪ್ರಧಾನಿಗಳೇ ಚೀನಾ ಪ್ರವಾಸದಲ್ಲಿರುವ ನಿಮ್ಮನ್ನು ನಾನು ಟಿವಿಯಲ್ಲೇ ನೋಡಿದೆ. ಆದರೆ ನೀವು ಅಲ್ಲಿ ಒತ್ತಡದಲ್ಲಿರುವಂತೆ ಕಾಣಿಸುತ್ತಿದ್ದೀರಿ. ಆದರೂ ನಿಮಗೆ ಎರಡು ವಿಷಗಳನ್ನು ನೆನಪಿಸಲು ಬಯಸುತ್ತೇನೆ. ಒಂದು ಡೋಕ್ಲಮ್ ವಿವಾದ ಮತ್ತೊಂದು ಪಿಒಕೆ ಮೂಲಕ ಹೋಗುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಬಗ್ಗೆ ಪ್ರಸ್ತಾಪಿಸಿ. ಭಾರತ ಈ ಎರಡು ಈ ಎರಡು ಪ್ರಮುಖ ವಿಷಗಳ ಬಗ್ಗೆ ನೀವು ಚೀನಾ ಅಧ್ಯಕ್ಷರೊಂದಿಗೆ ಮಾತನಾಡಬೇಕು ಎಂದು ಒತ್ತಾಯಿಸುತ್ತಿರುವುದಾಗಿ ರಾಹುಲ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಇದಕ್ಕೆ ತಮ್ಮ ಪಕ್ಷದ ಬೆಂಬಲವೂ ಇದೆ ಎಂದು ಹೇಳಿದ್ದಾರೆ.
ಡೋಕ್ಲಮ್ ವಿವಾದದ ಬಳಿಕ ಭಾರತ - ಚೀನಾ ದ್ವಿಪಕ್ಷೀಯ ಬಾಂಧವ್ಯದಲ್ಲಿ ಬಿರುಕು ಕಂಡುಬಂದಿತ್ತು. ಆದರೆ ಇಂದು ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಜೊತೆ ನಡೆಸಿದ 'ಅನೌಪಚಾರಿಕ ಶೃಂಗಸಭೆ'ಯಿಂದ ಅತ್ಯಂತ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗಿದೆ.