ಲೈಂಗಿಕ ಸಂಪರ್ಕವಿಲ್ಲದ ವಿವಾಹ ಅಸಿಂಧು: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು
ಮುಂಬೈ: ದಂಪತಿಗಳ ನಡುವೆ ಲೈಂಗಿಕ ಸಂಬಂಧವಿರದೇ ಹೋದಲ್ಲಿ ಅಂತಹಾ ವಿವಾಹಗಳನ್ನು ಅನೂರ್ಜಿತಗೊಳಿಸಬಹುದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಒಂಭತ್ತು ವರ್ಷಗಳ ಹಿಂದೆ ವಿವಾಹವಾಗಿದ್ದ ಕೊಲ್ಹಾಪುರ ಮೂಲದ ದಂಪತಿಗಳು ಅಂದಿನಿಂದಲೂ ಕಾನೂನು ಹೋರಾಟದಲ್ಲಿ ತೊಡಗಿದ್ದರು. ಪತಿ ಹಾಗೂ ಆತನ ಸಂಬಂಧಿಕರು ನನಗೆ ಮೋಸ ಮಾಡಿದ್ದಾರೆ. ಖಾಲಿ ಹಾಳೆಯ ಮೇಲೆ ಸಹಿ ಹಾಕಿಸಿಕೊಳ್ಳುವ ಮೂಲಕ ನನ್ನನ್ನು ವಿವಾಹವಾಗಿದ್ದಾರೆ. ಈ ಅನ್ಯಾಯದ ವಿವಾಹದಿಂಡ ತನಗೆ ಬಿಡುಗಡೆ ನೀದಬೇಕೆಂದು ಮಹಿಳೆ 2009ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದಳು.
"ಪತಿಯು ನಿಮಗೆ ಮೋಸ ಮಾಡಿದ ಬಗ್ಗೆ ಯಾವ ದಾಖಲೆಗಳಿಲ್ಲ ಅದಾಗ್ಯೂ ನಿಮ್ಮಿಬ್ಬರ ನಡುವೆ ಯಾವ ಲೈಂಗಿಕ ಸಂಬಂಧವಿರುವ ಸೂಚನೆಯೂ ಇಲ್ಲ. ದಾಂಪತ್ಯದಲ್ಲಿ ಸತಿ-ಪತಿಗಳ ನಡುವೆ ಲೈಂಗಿಕ ಸಂಬಧ ಅತ್ಯಂತ ಪ್ರಮುಖ ಭಾಗವಾಗಿರುತ್ತದೆ. ಅಂತಹಾ ಸಂಬಂಧವಿಲ್ಲದ ವೈವಾಹಿಕ ಬದುಕಿಗೆ ಅರ್ಥವಿರುವುದಿಲ್ಲ. ಅಂತಹವರ ನಡುವೆ ಹೊಂದಾಣಿಕೆ ಸಹ ಇರುವುದಿಲ್ಲ.ಹಾಗಾಗಿ ಇಂತಹಾ ವಿವಾಹ ಅಸಿಂಧುಗೊಳಿಸಬಹುದಾಗಿದೆ" ನ್ಯಾಯಮೂರ್ತಿ ಮೃದುಲಾ ಭಟ್ಕರ್ ಹೇಳಿದರು.
ಪ್ರಕರಣದಲ್ಲಿ ಪತಿ ಆಕೆಯೊಡನೆ ಲೈಂಗಿಕ ಸಂಪರ್ಕವಿತ್ತು, ಆಕೆ ಗರ್ಭವತಿಯಾಗಿದ್ದಳೆಂದು ವಾದಿಸಿದ್ದನು. ಆದರೆ ಗರ್ಭಧಾರಣೆಯ ಪರೀಕ್ಷೆಯ ಬಗ್ಗೆ ಸ್ತ್ರೀರೋಗತಜ್ಞರು ಯಾವುದೇ ಸಾಕ್ಷ್ಯಗಳನ್ನು ನೀಡಲು ವಿಫಲರಾಗಿದ್ದಾರೆ. "ಪತಿ ಪತ್ನಿಯರು ಒಬ್ಬರಿಗೊಬ್ಬರು ಪ್ರತೀಕಾರ ಮನೋಭಾವದೊಡನೆ ಹೋರಾಡುತ್ತಾ ಒಂಭತ್ತು ವರ್ಷಗಳನ್ನು ಹಾಳು ಮಾಡಿಕೊಂಡಿದ್ದಾರೆ. ಇದೇ ಮನೋಭಾವವಿದ್ದರೆ ಅವರ ಜೀವನದಲ್ಲಿ ಸಂತಸವು ಹುಟ್ಟುವುದೇ ಇಲ್ಲ ಹಾಗಾಗಿ ವಿಶೇಷ ವಿವಾಹದ ಅಧಿನಿಯಮದ ಅಡಿಯಲ್ಲಿ ಇವರಿಗೆ ವಿಚ್ಚೇದನ ನಿಡಬಹುದು" ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.