ಪ್ರಿಯಕರನ ಜತೆ ಸಿಕ್ಕಿಹಾಕಿಕೊಂಡ ಪತ್ನಿ ಗಂಡನ ಶಿಶ್ನವನ್ನೇ ಕಚ್ಚಿ ತುಂಡರಿಸಿದಳು!
ಪ್ರಿಯಕರನ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡ ಮಹಿಳೆ, ಅಲ್ಲಿಗೆ ಬಂದ ತನ್ನ...
ವೆಲ್ಲೂರ್: ಪ್ರಿಯಕರನ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡ ಮಹಿಳೆ, ಅಲ್ಲಿಗೆ ಬಂದ ತನ್ನ ಗಂಡನ ಶಿಶ್ನವನ್ನೇ ಕಚ್ಚಿ ತುಂಡರಿಸಿದ ಆಘಾತಕಾರಿ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.
ಕಳೆದ ಸೋಮವಾರ ಗುಡಿಯಾಟಂನ ಥುರೈಮೂಲೈ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪತಿ ಸೆಂತಮಾರೈ(55) ಶಿಶ್ನ ಕಚ್ಚಿದ ಪತ್ನಿ ಜಂಯತಿ(45)ಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಿಯಕರನ ಜೊತೆಗಿನ ತನ್ನ ಪ್ರಣಯದಾಟವನ್ನು ಪತಿ ನೋಡಿದ್ದು, ಅದನ್ನು ಗ್ರಾಮಸ್ಥರಿಗೆ ಹೇಳುತ್ತಾನೆ ಎಂದು ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಮಹಿಳೆ ಒಪ್ಪಿಕೊಂಡಿದ್ದಾಳೆ.
ಇನ್ನು ಸೆಂತಮಾರೈನನ್ನು ಸ್ಥಳೀಯರು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರಾಜೀವ್ ಗಾಂಧಿ ಸರ್ಕಾರಿ ವೈದ್ಯಕೀಯ ಆಸ್ಪತ್ರೆ ಹಾಗೂ ಕಾಲೇಜಿಗೆ ರವಾನಿಸಲಾಗಿದೆ. ಪ್ರಸ್ತುತ ಸೆಂತಮಾರೈ ಆರೋಗ್ಯ ಸ್ಥಿತಿ ಸ್ಥಿರವಾಗಿರುವುದಾಗಿ ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪತ್ನಿ ಜಯಂತಿ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಯಂತಿ ಹಾಗೂ ಸೆಂತಮಾರೈ ಕಳೆದ ಭಾನುವಾರ ರಾತ್ರಿ ಗ್ರಾಮದ ಆಷಾಢ ಮಾಸದ ವಿಶೇಷ ಹಬ್ಬಕ್ಕಾಗಿ ದೇವಸ್ಥಾನಕ್ಕೆ ತೆರಳಿದ್ದರು. ಸುಮಾರು ಮಧ್ಯರಾತ್ರಿ 1.30 ರ ವೇಳೆಗೆ ಕಾರ್ಯಕ್ರಮದ ಜನಜಂಗುಳಿಯಲ್ಲಿ ಜಯಂತಿ ಪತಿಯಿಂದ ಬೇರೆಯಾಗಿದ್ದಾಳೆ. ಒಂದು ಗಂಟೆಗೂ ಹೆಚ್ಚು ಹೊತ್ತಾದರೂ, ಜಯಂತಿ ಕಾಣದೇ ಇದ್ದುದರಿಂದ ಪತ್ನಿಯನ್ನು ಹುಡುಕಿಕೊಂಡು ಸೆಂತಮಾರೈ ಹೋಗಿದ್ದಾನೆ. ಈ ವೇಳೆ ಮತ್ತೊಬ್ಬ ಗ್ರಾಮಸ್ಥ ದಚ್ಚನಮೂರ್ತಿ ಎಂಬಾತನ ಜತೆ ಜಯಂತಿ ಇದ್ದುದನ್ನು ಸೆಂತಮಾರೈ ನೋಡಿದ್ದಾನೆ.
ಅಕ್ರಮ ಸಂಬಂಧವನ್ನು ಗ್ರಾಮದಲ್ಲಿ ಬಹಿರಂಗಪಡಿಸುವುದಾಗಿ ಸೆಂತಮಾರೈ ಧಮಕಿ ಹಾಕಿದ್ದಾನೆ. ಈ ವೇಳೆ ಉಂಟಾದ ಗಲಾಟೆಯಲ್ಲಿ ಸೆಂತಮಾರೈ ನ ಪಂಚೆ ಕೆಳಕ್ಕೆ ಬಿದ್ದಿದೆ. ಗ್ರಾಮಸ್ಥರಿಗೆ ವಿಚಾರ ಗೊತ್ತಾದರೆ, ಇಬ್ಬರಿಗೂ ಥಳಿಸುತ್ತಾರೆ ಎಂಬ ಭಯದಲ್ಲಿ, ಜಯಂತಿ ಸೆಂತಮಾರೈ ನ ಮರ್ಮಾಂಗವನ್ನು ಕಚ್ಚಿ ಹಲ್ಲೆ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.