ಪಾಟ್ನಾ: ಬಿಹಾರ ಮಾಜಿ ಸಚಿವೆ ಹಾಗೂ ಜೆಡಿಯು ಹಾಲಿ ಶಾಸಕಿ ಭೀಮಾ ಭಾರ್ತಿ ಅವರ ಪುತ್ರನ ಮೃತದೇಹ ಶುಕ್ರವಾರ ಪಾಟ್ನಾದ ರೈಲ್ವೆ ಟ್ರಾಕ್ ಬಳಿ ಪತ್ತೆಯಾಗಿದೆ.
ನಿನ್ನೆ ರಾತ್ರಿ ಸ್ನೇಹಿತರೊಂದಿಗೆ ತೆರಳಿದ್ದ ಭೀಮಾ ಭಾರ್ತಿ ಅವರ ಪುತ್ರ ದೀಪಕ್ ಕುಮಾರ್(21) ಅವರ ಮೃತದೇಹ ಇಂದು ನಳಂದ ಮೆಡಿಕಲ್ ಕಾಲೇಜಿನ ಮುಂಭಾಗದ ರಾಜಿಂದರ್ ನಗರ ರೈಲ್ವೆ ಸ್ಟೇಷನ್ ಸಮೀಪ ಪತ್ತೆಯಾಗಿದೆ ಎಂದು ಪಾಟ್ನಾ ಪೊಲೀಸ್ ವರಿಷ್ಠಾಧಿಕಾರಿ ಮನು ಮಹಾರಾಜ್ ಅವರು ಹೇಳಿದ್ದಾರೆ.
ದೀಪಕ್ ಕುಮಾರ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀಪಕ್ ಕುಮಾರ್ ಅವರ ತಲೆ ಮತ್ತು ತೊಡೆ ಭಾಗದಲ್ಲಿ ಗಾಯದ ಗುರುತುಗಳಿದ್ದು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಹಾರಾಜ್ ಅವರು ಹೇಳಿದ್ದಾರೆ. ಅಲ್ಲದೆ ಪ್ರಾಥಮಿಕ ತನಿಖೆಯಲ್ಲಿ ಇದೊಂದು ಆತ್ಮಹತ್ಯೆ ಎಂದು ಕಂಡುಬರುತ್ತಿದ್ದು, ಮರಣೋತ್ತರ ಪರೀಕ್ಷಾ ವರದಿ ಬಂದರ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದಿದ್ದಾರೆ.
ಇನ್ನು ವಶಕ್ಕೆ ಪಡೆಯಲಾಗಿರುವ ಆತನ ಸ್ನೇಹಿತರಾದ ರೋಷನ್ ಮತ್ತು ಮೃತ್ಯುಂಜಯ್ ಅವರು, ನಿನ್ನೆ ರಾತ್ರಿ ಮೂವರು ಒಟ್ಟಿಗೆ ಊಟ ಮಾಡಿದ ನಂತರ ದೀಪಕ್ ಮನೆಗೆ ಹೋದ. ನಾವು ಆತ ಸುರಕ್ಷಿತವಾಗಿ ಮನೆ ತಲುಪಿರಬೇಕು ಎಂದು ಭಾವಿಸಿದ್ದೇವೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಭಾರ್ತಿ ಮನೆಗೆ ಭೇಟಿ ನೀಡಿ, ಸಂತಾಪ ಸೂಚಿಸಿದ್ದಾರೆ.