ನೊಯ್ಡಾ: ಕನ್ವರ್ ಯಾತ್ರೆ ಆಯೋಜನೆ ಕುರಿತಂತೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, 11 ಮಂದಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶಗ ಗ್ರೇಟರ್ ನೊಯ್ಡಾದಲ್ಲಿ ಮಂಗಳವಾರ ನಡೆದಿದೆ.
ಕಳೆದ ವರ್ಷ ಎರಡೂ ಸಮುದಾಯಗಳು ಜೊತೆಗೂಡಿ ಯಾತ್ರೆಯನ್ನು ಆಯೋಜನೆ ಮಾಡಿತ್ತು. ಪ್ರಸಕ್ತ ವರ್ಷ ಯಾತ್ರೆಗೆ ಹಣ ಸಂಗ್ರಹಿಸುವ ವಿಚಾರ ಸಂಬಂಧ ಸಮುದಾಯಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಗುಂಪೊಂದು ಪ್ರತ್ಯೇಕವಾಗಿ ಯಾತ್ರೆನಡೆಸುವ ಕುರಿತು ಮಾತುಕತೆ ನಡೆಸಲು ಆರಂಭಿಸಿದಾಗ ಮತ್ತೊಂದು ಗುಂಪಿನವರು ಗಲಾಟೆ ಮಾಡಿದ್ದಾರೆ. ಬಳಿಕ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ 14 ಮಂದಿ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.