ದೇಶ

ಕಲೈನಾರ್ ಅಂತಿಮ ಯಾತ್ರೆ ಆರಂಭ, ಮರೀನಾ ಬೀಚ್ ನಲ್ಲಿ ಅಂತ್ಯಕ್ರಿಯೆ

Lingaraj Badiger
ಚೆನ್ನೈ: ನಿನ್ನೆ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಮುತ್ತುವೇಲ್ ಕರುಣಾನಿಧಿ ಅವರ ಅಂತಿಮ ಯಾತ್ರೆ ಆರಂಭವಾಗಿದ್ದು, ಸಂಜೆ ಮರೀನಾ ಬೀಚ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಚೆನ್ನೈನ ರಾಜಾಜಿ ಹಾಲ್ ನಿಂದ ಕಲೈನಾರ್ ಅಂತಿಮ ಯಾತ್ರೆ ಆರಂಭವಾಗಿದ್ದು, ಮರೀನಾ ಬೀಚ್ ವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕರುಣಾನಿಧಿ ಅವರು ಮಂಗಳವಾರ ಸಂಜೆ ಕಾವೇರಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಇಂದು ಬೆಳಗ್ಗೆಯಿಂದ ರಾಜಾಜಿ ಹಾಲ್ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. 
ಅಂತಿಮ ದರ್ಶನದ ಬಳಿಕ ಅಂತಿಮ ಯಾತ್ರೆ ಆರಂಭವಾಗಿದ್ದು, ಮರೀನಾ ಬೀಚ್ ನಲ್ಲಿ ಡಿಎಂಕೆ ಸಂಸ್ಥಾಪಕ ಅಣ್ಣಾದೊರೆ ಸಮಾಧಿ ಬಳಿಯೇ ಕರುಣಾನಿಧಿಯ ಅವರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.
ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸೇರಿದಂತೆ ಹಲವಾರು ಗಣ್ಯರು ಅಸ್ತಂಗತರಾದ ಎಂ.ಕರುಣಾನಿಧಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
SCROLL FOR NEXT