ದೇಶ

ಕೇರಳದಲ್ಲಿ ಮಳೆ ಅಬ್ಬರ, ಎಲ್ಲಾ 24 ಡ್ಯಾಂಗಳ ಗೇಟ್ ತೆರೆದು ಅಪಾರ ಪ್ರಮಾಣದ ನೀರು ಹೊರಕ್ಕೆ

Srinivasamurthy VN
ತಿರುವನಂತಪುರಂ: ಕೇರಳದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಮಳೆ ಸುರಿಯುತ್ತಿದ್ದು, ದೇವರನಾಡಲ್ಲಿ ಭಾರಿ ಅನಾಹುತವನ್ನೇ ಸೃಷ್ಟಿ ಮಾಡಿದೆ.
ಕೇರಳದಾದ್ಯಂತ ವರುಣನ ಅಬ್ಬರ ಮುಂದುವರೆದಿದ್ದು, ರಾಜ್ಯದ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಂತೆಯೇ ವಿವಿಧ ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ಬಹುತೇಕ ಎಲ್ಲ ಜಲಾಶಯಗಳೂ ಭರ್ತಿಯಾಗಿವೆ. ಇದೇ ಕಾರಣಕ್ಕೆ ಇಡುಕ್ಕಿ, ಚೆರುಥೋಣಿ, ಮುಲ್ಲಾ ಪೆರಿಯಾರ್, ಮಲಂಪುಂಜಾ, ತೆನ್ಮಾಲಾ ಡ್ಯಾಂ ಸೇರಿದಂತೆ ಕೇರಳದ ಎಲ್ಲ 24 ಡ್ಯಾಂಗಳ ಗೇಟ್ ಗಳನ್ನು ತೆರೆದು ಅಪಾರ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
ಪರಿಣಾಮ ಡ್ಯಾಂ ನದಿ ಪಾತ್ರದ ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿದೆ. ಬರೊಬ್ಬರಿ 26 ವರ್ಷಗಳ ಬಳಿಕ ಇಡುಕ್ಕಿ ಡ್ಯಾಂ ನ ಒಟ್ಟು ಐದು ಗೇಟ್ ಗಳ ಪೈಕಿ ನಾಲ್ಕು ಗೇಟ್ ಗಳನ್ನು ತೆರೆದು ನೀರು ಬಿಡಲಾಗುತ್ತಿದೆ. ಇದಕ್ಕೆ ಹೊಂದಿಕೊಂಡಂತೆ ಇರುವ ಚೆರುಥೋಣಿ ಡ್ಯಾಂನಿಂದಲೂ ನೀರನ್ನು ಹೊರಹಾಕಲಾಗುತ್ತಿದೆ. ರಾಜ್ಯದ ಒಟ್ಟಾರೆ ಜಲಾಶಯಗಳಲ್ಲಿ ಪ್ರಸ್ತುತ ಸುಮಾರು 97.61ರಷ್ಟು ನೀರು ಭರ್ತಿಯಾಗಿದ್ದು, ಜಲಾಶಯಗಳಲ್ಲಿ ಭಾರಿ ಪ್ರಮಾಣದ ಒಳಹರಿವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಯಿಂದಾಗಿ ಕೇರಳದಲ್ಲಿ ಈ ವರೆಗೂ ಸುಮಾರು 27 ಮಂದಿ ಸಾವನ್ನಪ್ಪಿದ್ದಾರೆ. ಕಳೆದೆರಡು ದಿನಗಳಿಂದ ಇಡುಕ್ಕಿಯಲ್ಲಿ 129.80 ಮಿಮೀ ಮಳೆಯಾಗಿದ್ದು, ಕೇರಳದಲ್ಲಿ ಅತೀ ಹೆಚ್ಚು ಮಳೆಹಾನಿಗೀಡಾದ ಜಿಲ್ಲೆ ಕೂಡ ಇಡುಕ್ಕಿಯಾಗಿದೆ. ಇಡುಕ್ಕಿಯಲ್ಲಿ ಈ ವರೆಗೂ ಒಟ್ಟು 11 ಮಂದಿ ಸಾವಿಗೀಡಾಗಿದ್ದು, ನೂರಾರು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ಹತ್ತಾರು ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿದೆ. 
ಇನ್ನು ಕೇರಳದಲ್ಲಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಚರಣೆ ಸಾಗಿದ್ದು, ಕರಾವಳಿ ರಕ್ಷಣಾ ಪಡೆ, ಎನ್ ಡಿಆರ್ ಎಫ್ ಸಿಬ್ಬಂದಿ ಮತ್ತು ಕೆಲ ಸ್ಥಳೀಯ ಸ್ವಯಂ ಸೇವಕ ಸಂಘಟನೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ವಿವಿಧ ಪ್ರದೇಶಗಳಲ್ಲಿ ಸರ್ಕಾರ ಮತ್ತು ಎನ್ ಡಿಆರ್ ಎಫ್ ತಂಡ 241 ಗಂಜಿ ಕೇಂದ್ರಗಳನ್ನು ತೆರೆದಿದೆ. ಅಂತೆಯೇ ಸುಮಾರು 15 ಸಾವಿರಕ್ಕೂ ಅಧಿಕ ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಈ ಪೈಕಿ ವಯನಾಡ್ ಒಂದರಲ್ಲೇ 5, 500 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ವಯನಾಡಿನಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಎತ್ತರದ ಪ್ರದೇಶಗಳಿಗೆ ಸ್ಥಳಾಂತರವಾಗುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.  ಇನ್ನು ಎರ್ನಾಕುಲಂನಲ್ಲಿ 3,456 ಮಂದಿ ರಕ್ಷಣೆ ಮಾಡಿ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. 
SCROLL FOR NEXT