ದೇಶ

ಆರ್ಥಿಕ ವಂಚನೆ; ನೀರವ್ ಮೋದಿ ಮತ್ತು ಕುಟುಂಬಿಕರಿಗೆ ಸಾರ್ವಜನಿಕ ನೊಟೀಸ್

Sumana Upadhyaya

ನವದೆಹಲಿ: ಭಾರತದಿಂದ ತಲೆಮರೆಸಿಕೊಂಡಿರುವ ಆಭರಣ ಉದ್ಯಮಿ ನೀರವ್ ಮೋದಿ ಸೋದರ ಮತ್ತು ಸೋದರಿಗೆ ಮುಂಬೈಯ ವಿಶೇಷ ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯ್ದೆ ನ್ಯಾಯಾಲಯ ಸಾರ್ವಜನಿಕ ಸಮ್ಮನ್ಸ್ ಜಾರಿ ಮಾಡಿದೆ.

ಸುಮಾರು 2 ಶತಕೋಟಿ ಡಾಲರ್ ರೂಪಾಯಿ ಬ್ಯಾಂಕ್ ವಂಚನೆಯ ಕೇಸಿನ ಪ್ರಮುಖ ಆರೋಪಿಯಾಗಿರುವ ನೀರವ್ ಮೋದಿಯ ಒಡಹುಟ್ಟಿದವರಿಗೆ ಸಮ್ಮನ್ಸ್ ಜಾರಿ ಮಾಡಿರುವ ನ್ಯಾಯಾಲಯ ಸೆಪ್ಟೆಂಬರ್ 25ಕ್ಕೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿದೆ.
ಒಂದು ವೇಳೆ ವಿಚಾರಣೆಗೆ ಹಾಜರಾಗುವಲ್ಲಿ ವಿಫಲವಾದರೆ ಅವರ ಆಸ್ತಿಯನ್ನು ಆರ್ಥಿಕ ಅಪರಾಧ ತಡೆಗಟ್ಟುವ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಮುಂಬೈಯ ಅಕ್ರಮ ಹಣ ವರ್ಗಾವಣೆ ಕಾಯ್ದೆ ತಡೆಗಟ್ಟುವ ನ್ಯಾಯಾಲಯ, ಪ್ರಮುಖ ದಿನಪತ್ರಿಕೆಗಳಲ್ಲಿ ಮೂರು ಸಾರ್ವಜನಿಕ ನೊಟೀಸ್ ಗಳನ್ನು ಜಾರಿ ಮಾಡಿದೆ. ಅದರಲ್ಲಿ ನೀರವ್ ಮೋದಿಯವರ ಸೋದರಿ ಪುರ್ವಿ ಮೋದಿ ಮತ್ತು ಸೋದರ ನೀಶಲ್ ಮೋದಿ ಅವರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ನೀರವ್ ಮೋದಿಯ ಅಕ್ರಮ ವ್ಯವಹಾರ ಬೆಳಕಿಗೆ ಬರುತ್ತಿದ್ದಂತೆ ಇವರು ಸಹ ದೇಶ ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗಿದೆ.

ಸೆಪ್ಟೆಂಬರ್ 25ರಂದು ವಿಚಾರಣೆಗೆ ನೀರವ್ ಮೋದಿಯನ್ನು ಸಹ ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯ್ದೆಯಡಿ ವಿಚಾರಣೆಗೆ ಕರೆಯಲಾಗಿದೆ.

SCROLL FOR NEXT