ಪ್ರವಾಹ ಪೀಡಿತ ಇಡುಕ್ಕಿಯ ವೈಮಾನಿಕ ಚಿತ್ರ
ತಿರುವನಂತಪುರಂ: ಕಳೆದ 50 ವರ್ಷಗಳಲ್ಲೇ ಕೇರಳದಲ್ಲಿ ಸಂಭವಿಸಿರುವ ಭೀಕರ ಮಳೆ ದುರಂತದಲ್ಲಿ ಈ ವರೆಗೂ 29 ಮಂದಿ ಸಾವಿಗೀಡಾಗಿದ್ದು, ಸಾವನ್ನಪ್ಪಿದವರ ಕುಟುಂಬಸ್ಥರಿಗೆ ಸಿಎಂ ಪಿಣರಾಯಿ ವಿಜಯನ್ ಪರಿಹಾರ ಘೋಷಣೆ ಮಾಡಿದ್ದಾರೆ.
ಇಂದು ಕೇರಳ ಪ್ರವಾಹ ಪೀಡಿ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಪಿಣರಾಯಿ ವಿಜಯನ್ ಅವರು, ಪ್ರವಾಹ ಪೀಡಿತ ಇಡುಕ್ಕಿ, ಮಲಪ್ಪುರಂ, ಅಲಪುಳ, ಎರ್ನಾಕುಲಂ, ಕೊಟ್ಟಾಯಂ, ಕಲ್ಲಿಕೋಟೆ ಮತ್ತು ಪಾಲಕ್ಕಾಡ್ ಪ್ರವಾಹದ ಸಾಕ್ಷಾತ್ ವರದಿ ಪಡೆದರು. ಬಳಿಕ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಿಎಂ ಪಿಣರಾಯಿ ವಿಜಯನ್ ಅವರು ಸಂತ್ರಸ್ತರ ಕುಟುಂಬಗಳಿಗೆ ತಲಾ 4 ಲಕ್ಷ ಮತ್ತು ಸಾವನ್ನಪ್ಪಿರುವವವ ಕುಟುಂಬಸ್ಥರಿಗೆ ತಲಾ 10 ಲಕ್ಷ ಪರಿಹಾರ ನೀಡುವುದಾಗಿ ವಿಜಯನ್ ಘೋಷಣೆ ಮಾಡಿದರು.
ಇನ್ನು ಕೇರಳ ಪ್ರವಾಹದಲ್ಲಿ ಈ ವರೆಗೂ ಸುಮಾರು 15, 600 ಮಂದಿಯನ್ನುಪ್ರವಾಹ ಪೀಡಿತ ಪ್ರದೇಶಗಳಿಂದ ರಕ್ಷಣೆ ಮಾಡಲಾಗಿದ್ದು, ರಕ್ಷಿಸಲ್ಪಟ್ಟವರೆಲ್ಲರೂ ನಿರಾಶ್ರಿತ ಶಿಬಿರ ಮತ್ತು ಗಂಜಿಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಅಂತೆಯೇ ರಾಜ್ಯಾದ್ಯಂತ ಸುಮಾರು 500 ನಿರಾಶ್ರಿತ ಶಿಬಿರಗಳನ್ನು ತೆರೆಯಲಾಗಿದ್ದು, ಅಲ್ಲಲ್ಲಿ ಸ್ವಯಂ ಪ್ರೇರಿರತರಾಗಿ ಕೆಲ ಸ್ಥಳೀಯ ಸಂಘಟನೆಗಳು ಗಂಜಿ ಕೇಂದ್ರವನ್ನು ತೆರೆದಿವೆ. ಭಾರತೀಯ ಸೇನೆಯ ಕಾಲ್ಗಳ, ನೌಕಾದಳ ಮತ್ತು ವಾಯುದಳದ ಸಿಬ್ಬಂದಿಗಳು ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾಷ್ಟ್ರೀಯ ವಿಪತ್ತು ದಳದ ಸಿಬ್ಬಂದಿಗಳಿಗೆ ಸಾಥ್ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಕೆಜೆ ಅಲ್ಫಾನ್ಸೋ ಹೇಳಿದ್ದಾರೆ.