ನೀರು ಕೊಡದ ಪಾಕಿಸ್ತಾನದ ವಿರುದ್ಧ ತಿರುಗಿಬಿದ್ದ ಪಾಕ್ ಆಕ್ರಮಿತ ಕಾಶ್ಮೀರದ ಜನತೆ!
ಮುಝಾಫರಾಬಾದ್:ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತೆ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ಹೆಚ್ಚಾಗುತ್ತಿದ್ದು, ಮುಝಾಫರಾಬಾದ್ ನ ಜನತೆ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.
ಈ ಬಾರಿ ನದಿ ನೀರಿನ ವಿಷಯವಾಗಿ ಪಾಕ್ ವಿರುದ್ಧ ತಿರುಗಿಬಿದ್ದಿರುವ ಪಿಒಕೆ ಜನರು, ನೀಲಮ್ ನದಿ ನೀರನ್ನು ತಮಗೆ ನೀಡದೇ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ನೀರು ಹರಿಸುತ್ತಿದೆ ಎಂದು ಪ್ರತಿಭಟನಾ ನಿರತರು ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ನೀರು ಹರಿಸುವುದಕ್ಕಾಗಿ ನಮಗೆ ನೀರಿಲ್ಲದಂತೆ ಮಾಡಿದ್ದಾರೆ. ಪಾಕಿಸ್ತಾನ ಸರ್ಕಾರದ ಈ ನಡೆಯಿಂದಾಗಿ ನದಿಯಲ್ಲಿರುವ ನೀರು ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಚರಂಡಿ ನೀರಷ್ಟೇ ನಮಗೆ ಸಿಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳು ಇಲ್ಲದೆಯೂ ನಾವು ಜೀವಿಸಬಹುದು ಆದರೆ ನೀರು ಇಲ್ಲದೇ ಜೀವಿಸುವುದು ಹೇಗೆ? ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಇದೇ ವೇಳೆ ನೀಲಂ ಹೈಡ್ರೋ ಪವರ್ ಯೋಜನೆಗೂ ವಿರೋಧ ವ್ಯಕ್ತವಾಗುತ್ತಿದ್ದು, ಪಾಕಿಸ್ತಾನದವರು ನಮಗೆ ಉಚಿತ ವಿದ್ಯುತ್ ನೀಡಬೇಕು, ಆದರೆ ನಮ್ಮಿಂದ ನಾಲ್ಕು ಪಟ್ಟು ವಸೂಲಿ ಮಾಡುತ್ತಾರೆ. ನಮ್ಮ ಪ್ರದೇಶಕ್ಕೆ ಪರಿಹಾ ಪ್ಯಾಕೇಜ್ ನ್ನು ಘೋಷಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.