ಸೇತುವೆ ನಿರ್ಮಿಸಿ 100 ಜನರ ಪ್ರಾಣ ರಕ್ಷಿಸಿದ ಸೇನೆ
ತಿರುವನಂತಪುರಂ: ಕೇರಳದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮುಂಗಾರು ಮಳೆ ಅಬ್ಬರ ಮತ್ತ ಪ್ರವಾಹಕ್ಕೆ ಭಾರತೀಯ ಸೇನೆ ಸೈನಿಕರು ಅಡ್ಡಿಯಾಗಿ ನಿಂತು ಸಂತ್ರಸ್ಥರಾಗಿದ್ದ ನೂರಾರು ಮಂದಿಯನ್ನು ರಕ್ಷಿಸಿದ್ದಾರೆ.
ಕೇರಳದಲ್ಲಿ ಈ ವರೆಗೂ ನಡೆದ ವಿವಿಧ ರೀತಿಯ ಮಳೆ ದುರಂತದಲ್ಲಿ 79 ಮಂದಿ ಸಾವನ್ನಪ್ಪಿದ್ದು, ಸಾಕಷ್ಟು ಪ್ರದೇಶಗಳಲ್ಲಿ ಸಾವಿರಾರು ಮಂದಿ ಅಪಾಯದಲ್ಲಿ ಸಿಲುಕಿದ್ದಾರೆ. ಅಪಾಯದಲ್ಲಿರುವವರನ್ನು ಭಾರತೀಯ ಸೇನೆಯ ಸೈನಿಕರು ಮತ್ತು ಎನ್ ಡಿಆರ್ ಎಫ್ ತಂಡದ ಸಿಬ್ಬಂದಿಗಳು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇನ್ನು ಕೇರಳದ ಪ್ರವಾಹ ಪೀಡಿತ ಮಲಪ್ಪುಳದಲ್ಲಿ ಭಾರತೀಯ ಸೇನೆ ಮತ್ತೊಮ್ಮೆ ತನ್ನ ತಾಕತ್ತು ಪ್ರದರ್ಶಿಸಿದ್ದು, ಪ್ರವಾಹದಿಂದಾಗಿ ಬಾಹ್ಯ ಜಗತ್ತಿನ ಸಂಪರ್ಕವನ್ನೇ ಕಡಿದುಕೊಂಡು ಅಪಾಯಕ್ಕೆ ಸಿಲುಕಿದ್ದ ಒಂದಿಡೀ ಗ್ರಾಮದ ಜನರನ್ನು ಗುರುತಿಸಿ ರಕ್ಷಿಸಿದ್ದಾರೆ.
ಕೇರಳದ ಮಲಪ್ಪುಳದ ವಲಿಯಕಾಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಭೀಕರ ಪ್ರವಾಹದಿಂದಾಗಿ ವಲಿಯಕಾಡು ಗ್ರಾಮದ ಸುಮಾರು 100ಕ್ಕೂ ಅಧಿಕ ಗ್ರಾಮಸ್ಥರು ಅಪಾಯಕ್ಕೆ ಸಿಲುಕಿದ್ದರು. ಈ ವೇಳೆ ಇಲ್ಲಿ ರಕ್ಷಣಾ ಕಾರ್ಯಾಚರಣೆ ನಿಮಿತ್ತ ಆಗಮಿಸಿದ ಸೈನಿಕರಿಗೆ ಗ್ರಾಮಸ್ಥರ ಇರುವಿಕೆ ತಿಳಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಗ್ರಾಮಸ್ಥರನ್ನು ರಕ್ಷಿಸಲು ಪ್ರವಾಹದ ನೀರಿಗೆ ಅಡ್ಡಲಾಗಿ ಸ್ಥಳದಲ್ಲೇ ಸುಮಾರು 35 ಅಡಿ ಉದ್ದದ ಸೇತುವೆ ನಿರ್ಮಿಸಿದ ಸೈನಿಕರು ಅದರ ಮೂಲಕ ಒಬೊಬ್ಬರನ್ನಾಗಿ ಸುಮಾರು 100 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಿದ್ದಾರೆ.
ಈ ಹಿಂದೆ ಉತ್ತರಾಖಂಡದಲ್ಲೂ ಇದೇ ರೀತಿಯ ಸಾಹಸ ಪ್ರದರ್ಶಿಸಿದ್ದ ಸೈನಿಕರು ಅಲ್ಲಿಯೂ ಸಾವಿರಾರು ಮಂದಿಯನ್ನು ರಕ್ಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos