ನವದೆಹಲಿ: ಬಂದ್ ಆಗಿರುವ ತಮಿಳುನಾಡಿನ ತೂತುಕುಡಿಯಲ್ಲಿರುವ ವೇದಾಂತ ಗ್ರೂಪ್ ನ ಸ್ಟೆರ್ಲೈಟ್ ತಾಮ್ರ ಸಂಸ್ಕರಣಾ ಘಟಕದ ಆಡಳಿತ ವಿಭಾಗ ಬಳಕಗೆ ಅವಕಾಶ ಕಲ್ಪಿಸಿದ ರಾಷ್ಟ್ರೀಯ ಹಸಿರು ಪೀಠ(ಎನ್ ಜಿಟಿ)ದ ಆದೇಶ ಪ್ರಶ್ನಿಸಿದ ತಮಿಳುನಾಡು ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ತಮಿಳುನಾಡು ಸರ್ಕಾರದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಆರ್ ಎಫ್ ನಾರಿಮನ್ ಹಾಗೂ ಇಂದು ಮಲ್ಹೋತ್ರಾ ಅವರು, ತಾಮ್ರ ಘಟಕ ಖಾಯಂ ಬಂದ್ ಕುರಿತು ಮತ್ತು ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ಸಂರಕ್ಷಣೆಯ ಕುರಿತು ಎನ್ ಜಿಟಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದೆ.
ಅರ್ಹತೆ ಆಧಾರದ ಮೇಲೆ ಎನ್ ಜಿಟಿ ಪ್ರಕರಣದ ವಿಚಾರಣೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ರಾಜ್ಯ ಸರ್ಕಾರ ಮುಕ್ತವಾಗಿ ತನ್ನ ವಾದ ಮಂಡಿಸಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಎನ್ ಜಿಟಿ ಕಳೆದ ಆಗಸ್ಟ್ 9ರಂದು ವೇದಾಂತ ಗ್ರೂಪ್ ಗೆ ಸ್ಟೆರ್ಲೈಟ್ ತಾಮ್ರ ಘಟಕದ ಆಡಳಿತ ವಿಭಾಗ ಪ್ರವೇಶಿಸಲು ಅವಕಾಶ ನೀಡಿತ್ತು. ಅಲ್ಲದೆ ಆಡಳಿತ ವಿಭಾಗ ಬಳಕೆಗೆ ಅವಕಾಶ ನೀಡಿದೆ ಪರಿಸರಕ್ಕೆ ಯಾವುದೇ ಹಾನಿ ಆಗಲ್ಲ ಎಂದಿತ್ತು.
ತೂತುಕುಡಿ ನಿವಾಸಿಗಳ ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಕಳೆದ ಮೇ ತಿಂಗಳಲ್ಲಿ ಸ್ಟೆರ್ಲೈಟ್ ತಾಮ್ರ ಕಂಪನಿಗೆ ವಿದ್ಯುತ್ ಸ್ಥಗಿತಗೊಳಿಸುವ ಮೂಲಕ ಘಟಕವನ್ನು ಬಂದ್ ಮಾಡಿದೆ.