ದೇಶ

ಕೇರಳ ಪ್ರವಾಹ :ಕಾಂಗ್ರೆಸ್ ಸಂಸದರು, ಶಾಸಕರಿಂದ ಒಂದು ತಿಂಗಳ ವೇತನ ಪರಿಹಾರ

Nagaraja AB

ನವದೆಹಲಿ: ಕೇರಳ ಪ್ರವಾಹವನ್ನು ರಾಷ್ಟ್ರೀಯ ವಿಪತ್ತಾಗಿ ಘೋಷಿಸುವಂತೆ  ಕಾಂಗ್ರೆಸ್ ಆಗ್ರಹಿಸಿದ್ದು, ಪಕ್ಷದಿಂದ ಆಯ್ಕೆಯಾಗಿರುವ ಎಲ್ಲ ಜನಪ್ರತಿನಿಧಿಗಳು ಪರಿಹಾರ ಕಾರ್ಯವಾಗಿ ಒಂದು ತಿಂಗಳ ವೇತನವನ್ನು ನೀಡುವಂತೆ ಸೂಚಿಸಲಾಗಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯದರ್ಶಿಗಳು, ಪಕ್ಷದ ರಾಜ್ಯ ಉಸ್ತುವಾರಿ, ರಾಜ್ಯ ಘಟಕದ ಅಧ್ಯಕ್ಷರು ಹಾಗೂ  ಶಾಸಕಾಂಗ ಸಭೆ ನಾಯಕರು ಹಾಗೂ  ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜಿವಾಲಾ, ಕೇರಳದಲ್ಲಿ 180 ಮಂದಿ ಸಾವನ್ನಪ್ಪಿದ್ದು, 3 ಸಾವಿರ ಕೋಟಿ ರೂ ಮೌಲ್ಯದ ಆಸ್ತಿ ಪಾಸ್ತಿ ನಷ್ಟ ಉಂಟಾಗಿದೆ. ಕೇರಳ ಸರ್ಕಾರಕ್ಕೆ ನೆರವು ನೀಡಲು ಮೋದಿ ಸರ್ಕಾರ ಮುಂದಾಗಬೇಕೆಂದು  ಮನವಿ ಮಾಡಿದರು.

ಎಐಸಿಸಿ ಮೂಲಕ ಕೇರಳ ರಾಜ್ಯಕ್ಕೆ ಪರಿಹಾರ ನೀಡುವ ಸಲುವಾಗಿ ಎಲ್ಲಾ ಲೋಕಸಭೆ, ರಾಜ್ಯಸಭೆ ಸದಸ್ಯರು,  ಶಾಸಕರು, ವಿಧಾನಪರಿಷತ್ ಸದಸ್ಯರು ಒಂದು ತಿಂಗಳ ವೇತನ ನೀಡುವಂತೆ ನಿರ್ಧರಿಸಲಾಗಿದೆ. ಪಂಜಾಬ್ ಹಾಗೂ ಕರ್ನಾಟಕ ಸರ್ಕಾರದಿಂದ ಈಗಾಗಲೇ  10 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಸುರ್ಜಿವಾಲಾ ಹೇಳಿದರು.

ಕೇರಳ ರಾಜ್ಯಕ್ಕೆ  ಪರಿಹಾರ ಸಾಮಾಗ್ರಿಗಳನ್ನು ಸಾಗಿಸುವ ಸಲುವಾಗಿ ಪಾಂಡಿಚೇರಿ ಹೊರತು ಪಡಿಸಿಕರ್ನಾಟಕ, ತಮಿನಾಡು ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ವಿಶೇಷ ಪರಿಹಾರ ಸಮಿತಿಯನ್ನು ರಚಿಸಲಾಗಿದೆ. ಪರಿಹಾರ ನೀಡುವ ವಿಚಾರದಲ್ಲಿ ಮೋದಿ ಸರ್ಕಾರ ತಾರಾತಾಮ್ಯ ಧೋರಣೆಯನ್ನು ನಿಲ್ಲಿಸಬೇಕು , ಕೇರಳ, ಕರ್ನಾಟಕ ಮತ್ತಿತರ ಪ್ರವಾಹ ಪೀಡಿತ ರಾಜ್ಯಗಳಿಗೆ ಅಗತ್ಯ ನೆರವು ನೀಡುವಂತೆ ಸುರ್ಜಿವಾಲಾ  ಒತ್ತಾಯಿಸಿದರು.

SCROLL FOR NEXT