ಸಾಗರ್(ಮಧ್ಯ ಪ್ರದೇಶ): ಕಾಮುಕರಿಂದ ಅತ್ಯಾಚಾರಕ್ಕೊಳಗಾಗುತ್ತಿದ್ದ ಬಾಲಕಿಯನ್ನು ಸಾಕು ನಾಯಿಯು ರಕ್ಷಿಸಿರುವ ಘಟನೆ ಮಧ್ಯ ಪ್ರದೇಶದ ಸಾಗರ್ ಜಿಲ್ಲೆ ಕರೀಲಾ ಗ್ರಾಮದಲ್ಲಿ ನಡೆದಿದೆ.
ಸಂತ್ರಸ್ಥ ಬಾಲಕಿಯ ಮೇಲೆ ಇಬ್ಬರು ಕಾಮುಕರು ಮುಗಿಬಿದ್ದು ಅತ್ಯಾಚಾರ ನಡೆಸಲು ಮುಂದಾಗಿದ್ದಾರೆ. ಆಗ ಬಾಲಕಿಯ ಕೂಗನ್ನು ಕೇಳಿದ್ದ ನಾಯಿಯು ಅತ್ಯಾಚಾರಿ ಕಾಮುಕನೊಬ್ಬನ ಕಾಲಿಗೆ ಕಚ್ಚಿದ್ದಲ್ಲದೆ ಅವರನ್ನು ಅಲ್ಲಿಂದ ಓಡುವಂತೆ ಮಾಡಿದೆ.
ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು 14 ವರ್ಷದ ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ ಎಂದು ಪೋಲೀಸರು ತಿಳಿಸಿದ್ದಾರೆ.
ರಾತ್ರಿ ಮನೆ ಮುಂದೆ ಕುಳಿತಿದ್ದ ಬಾಲಕಿಯನ್ನು ಅದೇ ಗ್ರಾಮದ ನಿವಾಸಿಗಳಾದ ಐಶು ಹೈರವಾರ್(39), ಪುನಿತ್ ಹೈರವಾರ್(24) ಎನ್ನುವವರು ಮಾರಕಾಸ್ತ್ರಗಳನ್ನು ತೋರಿಸಿ ಅಪಹರಿಸಿದ್ದಾರೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾರೆ.
ಆ ವೇಳೆ ಗಟ್ಟಿಯಾಗಿ ಕೂಗಿದ ಬಾಲಕಿಯ ದನಿ ಕೇಳಿದ ಸಾಕು ನಾಯಿ ಅಲ್ಲಿಗೆ ಆಗಮಿಸಿದ್ದು ಅತ್ಯಾಚಾರಿಗಳ ಮೇಲೆ ದಾಳಿ ಮಾಡಿದೆ. ಆವೇಳೆ ಅವರುಗಳು ನಾಯಿಯ ಮೇಲೆ ಹಲ್ಲೆಗೆ ಮುಂದಾದಾಗ ನಾಯಿಯು ಐಶು ಹೈರ್‍ವಾರ್ ಕಾಲನ್ನು ಬಲವಾಗಿ ಕಚಿ ಗಾಯಗೊಳಿಸಿದ್ದಲ್ಲದೆ ಜೋರಾಗಿ ಬೊಗಳಲು ಪ್ರಾರಂಭಿಸಿದೆ.
ನಾಯಿ ಕೂಗುತ್ತಿದ್ದದ್ದನ್ನು ಕೇಳಿಸಿಕೊಂಡ ಗ್ರಾಮಸ್ಥರು ಇತ್ತ ದೌಡಾಯಿಸುತ್ತಲೇ ಕಾಮುಕರು ಅಲ್ಲಿಂದ ಪರಾರಿಯಾಗಿದ್ದಾರೆ.
ಘಟನೆ ಕುರಿತು ಶನಿವಾರ ಬಾಲಕಿಯ ಪೋಷಕರು ಪೋಲೀಸರಿಗೆ ದೂರು ಸಲ್ಲಿಸಿದ್ದು ಭಾನುವಾರ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ನಾಯಿಯಿಂದಾಗಿ ಬಾಲಕಿ ಅತ್ಯಾಚಾರದಂತಾ ಭೀಕರ ದುರಂತದಿಂದ ಪಾರಾಗಿದ್ದಾಳೆ ಎಂದು ಪೋಲೀಸರು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics