ದೇಶ

ನವಜೋತ್ ಸಿಂಗ್ ಸಿಧು ಹುತಾತ್ಮ ಯೋಧರ ಕುಟುಂಬದ ಕ್ಷಮೆ ಯಾಚಿಸಬೇಕು: ಸಂಪುಟ ಸಹೋದ್ಯೋಗಿ ಪಟ್ಟು

Srinivas Rao BV
ಚಂಡೀಗಢ: ಭಾರತೀಯ ಯೋಧರ ಹತ್ಯೆಗೆ ಕಾರಣವಾಗಿರುವ ಪಾಕ್ ಸೇನಾ ಮುಖ್ಯಸ್ಥರನ್ನು ಆಲಿಂಗಿಸಿಕೊಂಡಿದ್ದಕ್ಕಾಗಿ ನವಜೋತ್ ಸಿಂಗ್ ಸಿಧು ಹುತಾತ್ಮ ಯೋಧರ ಕುಟುಂಬದವರಲ್ಲಿ ಕ್ಷಮೆ ಕೇಳಬೇಕೆಂದು ಸಚಿವ ಸಂಪುಟದ ಸಹೋದ್ಯೋಗಿಯೊಬ್ಬರು ಆಗ್ರಹಿಸಿದ್ದಾರೆ. 
ಪಂಜಾಬ್ ಸಚಿವ ಸಂಪುಟದಲ್ಲಿ ನವಜೋತ್ ಸಿಂಗ್ ಸಿಧು ಅವರ ಸಹೋದ್ಯೋಗಿಯಾಗಿರುವ ಸಚಿವ ತ್ರಿಪಾಟ್ ರಾಜೇಂದ್ರ ಸಿಂಗ್ ಬಾಜ್ವಾ ಸಿಧು ಕ್ಷಮೆಯಾಚನೆಗೆ ಆಗ್ರಹಿಸಿದ್ದು, "ಸಿಧು ನನ್ನ ಸಹೋದ್ಯೋಗಿ ನಾನು ಅವರಿಗೆ ನಿರ್ದೇಶನ ನೀಡುವುದಕ್ಕೆ ಸಾಧ್ಯವಿಲ್ಲ. ಆದರೆ ಅವರು ಪಾಕ್ ಸೇನಾ ಮುಖ್ಯಸ್ಥರನ್ನು ಆಲಿಂಗನ ಮಾಡಿಕೊಂಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಯೋಧರ ಕುಟುಂಬ ಸದಸ್ಯರಲ್ಲಿ ಕ್ಷಮೆ ಯಾಚಿಸಬೇಕೆಂದು ಸಲಹೆಯಷ್ಟೇ ನೀಡುತ್ತಿದ್ದೇನೆ, ಕ್ಷಮೆ ಕೋರುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಭಾವಿಸುತ್ತೇನೆ ಎಂದು ರಾಜೇಂದ್ರ ಸಿಂಗ್ ಬಾಜ್ವಾ ಅಭಿಪ್ರಾಯಪಟ್ಟಿದ್ದಾರೆ. 
ಒಬ್ಬ ಸ್ನೇಹಿತ ಮತ್ತೋರ್ವ ಸ್ನೇಹಿತನನ್ನು ಆಹ್ವಾನಿಸಿದ್ದರು, ಸಿಧು ಇಮ್ರಾನ್ ಖಾನ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹೋಗಿಬಂದಿದ್ದು ತಪ್ಪೇನು ಅಲ್ಲ ಎಂದು ತ್ರಿಪಾಠ್ ರಾಜೇಂದ್ರ ಸಿಂಗ್ ಹೇಳಿದ್ದಾರೆ. 
ಪಾಕ್ ಸೇನಾ ಮುಖ್ಯಸ್ಥರನ್ನು ಸಿಧು ಆಲಿಂಗಿಸಿಕೊಂಡಿದ್ದರ ಬಗ್ಗೆ ಸ್ವತಃ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಸಿಧು ಸಂಪುಟ ಸಹೋದ್ಯೋಗಿಯೂ ಕ್ಷಮೆ ಕೇಳಬೇಕೆಂದು ಸಲಹೆ ನೀಡಿದ್ದು ಮಹತ್ವ ಪಡೆದುಕೊಂಡಿದೆ. 
SCROLL FOR NEXT