ದೇಶ

ಹೈದರಾಬಾದ್: ಮಹಿಳಾ ವಕೀಲರ ಮೇಲೆ ಅತ್ಯಾಚಾರ ನಡೆಸಿದ್ದ ನ್ಯಾಯಾಧೀಶನಿಗೆ ಜೈಲು!

Raghavendra Adiga
ಹೈದರಾಬಾದ್: ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳಾ ವಕೀಲರ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ನ್ಯಾಯಾಧೀಶರೊಬ್ಬರನ್ನು ಹೈದರಾಬಾದ್ ಪೋಲೀಸರು ಬಂಧಿಸಿದ್ದಾರೆ.
ಸೂರ್ಯಪೇಟ್ ಪಟ್ಟಣದ ಜೂನಿಯರ್ ಫೀಲ್ಡ್ ಜಡ್ಜ್ ಆಗಿರುವ ಪಿ. ಸತ್ಯನಾರಯಣ ಅವರು ಬಂಧಿಯಾಗಿದ್ದು ನ್ಯಾಯಾಧೀಶರು ತಾವು ಮಹಿಳಾ ವಕೀಲೆಯನ್ನು ತಾನು ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದರು ಎನ್ನಲಾಗಿದೆ.
ತೆಲಂಗಾಣ ಪೋಲೀಸರು ಆರೋಪಿ ನ್ಯಾಯಾಧೀಶನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು ನ್ಯಾಯಾಲಯ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಹೈದರಾಬಾದ್ ನ ಚಿಕ್ಕದಪಲ್ಲಿ ಪೋಲೀಸ್ ಠಾನೆಯಲ್ಲಿ ಆ.5ರಂದು ಪ್ರಕರಣ ದಾಖಲಿಸಲಾಗಿದೆ. ಎಸ್ಸಿ, ಎಸ್ಟಿ ದೌರ್ಜನ್ಯ (ತಡೆಗಟ್ಟುವಿಕೆ) ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪೋಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಸತ್ಯನಾರಾಯಣ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಅನೇಕ ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಅವರು ಬೇರೊಬ್ಬ ಮಹಿಳೆಯೊಡನೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಸಂತ್ರಸ್ಥ ಮಹಿಳೆ ದೂರಿನಲ್ಲಿ ಹೇಳಿದ್ದಾರೆ. ಸಧ್ಯ ಪ್ರಾಥಮಿಕ ತನಿಖೆ ಹಾಗೂ ಹೈಕೋರ್ಟ್ ನಿಂದ ಪಡೆದ ಅನುಮತಿಯ ಮೇರೆಗೆ ನ್ಯಾಯಾಧೀಶರ ಬಂಧನವಾಗಿದೆ ಎಂದು ಪೋಲೀಸರು ಹೇಳಿದರು.
SCROLL FOR NEXT