ನವದೆಹಲಿ: ಭಯೋತ್ಪಾದನೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಮಾನವಹಕ್ಕುಗಳ ಹೋರಾಟಗಾರ ಹಾಗೂ ಮಾವೋವಾದಿಗಳ ಬಗ್ಗೆ ಸಹಾನುಭೂತಿ ಹೊಂದಿರುವ ಗೌತಮ್ ನವಲಖಾ ಅವರನ್ನು ದೆಹಲಿಯಿಂದ ಹೊರಗೆ ಕರೆದೊಯ್ಯದಂತೆ ಮತ್ತು ಗೃಹ ಬಂಧನದಲ್ಲಿರಿಸುವಂತೆ ಮಹಾರಾಷ್ಟ್ರ ಪೊಲೀಸರಿಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ.
ಇಂದು ದೆಹಲಿ ಪೊಲೀಸರು ಹಾಗೂ ಪುಣೆ ಪೊಲೀಸರು ಜಂಟಿಯಾಗಿ ಗೌತಮ್ ನವಲಖಾ ಅವರನ್ನು ಬಂಧಿಸಿ ದೆಹಲಿಯ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಕೋರ್ಟ್, ಗೌತಮ್ ನವಲಖಾ ಅವರನ್ನು ಪುಣೆಯ ಸ್ಥಳೀಯ ಕೋರ್ಟ್ ಗೆ ಕರೆದೊಯ್ಯಲು ಅನುಮತಿ ನೀಡಿತ್ತು.
ಈ ಮಧ್ಯೆ, ನವಲಖಾ ಪರ ವಕೀಲರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಮುಂದಿನ ಆದೇಶದವರೆಗೆ ಗೌತಮ್ ನವಲಖಾ ಅವರನ್ನು ದೆಹಲಿಯಿಂದ ಹೊರಗೆ ಕರೆದೊಯ್ಯದಂತೆ ಮತ್ತು ಅವರನ್ನು ಅವರ ನಿವಾಸದಲ್ಲಿಯೇ ಗೃಹ ಬಂಧನದಲ್ಲಿರಿಸುವಂತೆ ಆದೇಶಿಸಿ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ಪೊಲೀಸರು ಇಂದು ದೇಶಾದ್ಯಂತ ಮಾವೋವಾದಿಗಳ ಬಗ್ಗೆ ಸಹಾನುಭೂತಿ ಹೊಂದಿರುವ ಹಲವು ಹೋರಾಟಗಾರರ ಮನೆ ಮೇಲೆ ದಾಳಿ ನಡೆಸಿ, ಅವರನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics