ನಿರಾಶ್ರಿತ ಶಿಬಿರವಾಗಿ ಮಾರ್ಪಟ್ಟಿರುವ ಶಾಲೆ
ತಿರುವನಂತಪುರಂ: 400 ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿದ್ದ ಕೇರಳದ ಶತಮಾನ ಪ್ರವಾಹದ ಅಬ್ಬರ ತಣ್ಣಗಾಗುತ್ತಿದ್ದಂತೆಯೇ ಇತ್ತ ಮುಚ್ಚಲ್ಪಟ್ಟಿದ್ದ ಶಾಲೆಗಳು ಪುನಾರಂಭವಾಗುತ್ತಿವೆ.
ನಾಳೆಯಿಂದಲೇ ಕೇರಳದ ಎಲ್ಲ ಶಾಲೆಗಳು ಪುನಾರಂಭವಾಗಲಿದ್ದು, ಈ ಬಗ್ಗೆ ಶಿಕ್ಷಣ ಸಚಿವ ಸಿ ರವೀಂದ್ರನಾಥ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪ್ರವಾಹದ ಹೊಡತಕ್ಕೆ ಸಿಲುಕಿದ್ದ ಕೇರಳದಲ್ಲಿ ಬಹುತೇಕ ಶಾಲೆಗಳು ಮುಚ್ಚಿ ಹೋಗಿದ್ದವು. ಅಂತೆಯೇ ಕೆಲ ಶಾಲೆಗಳು ನಿರಾಶ್ರಿತ ಶಿಬಿರವಾಗಿ ಮಾರ್ಪಟ್ಟಿತ್ತು. ಇದೀಗ ಪ್ರವಾಹದ ಅಬ್ಬರ ಕಡಿಮೆಯಾಗಿದ್ದು, ಶಾಲೆಗಳನ್ನು ಪುನಃ ಆರಂಭ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇಂದು ಸಚಿವ ರವೀಂದ್ರ ನಾಥ್ ಅವರ ಕೇರಳಗ ಎಲ್ಲ ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಅಂತೆಯೇ ಓಣಂ ರಜೆ ಕೂಡ ಮುಕ್ತಾಯವಾಗಿದ್ದು, ಇದೇ ಸಂದರ್ಭದಲ್ಲಿ ಶಾಲೆ ಪುನಾರಂಭವಾಗುತ್ತಿರುವುದು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
'ಪ್ರವಾಹ ಪೀಡಿತ ಬಹುತೇಕ ಪ್ರದೇಶಗಳಲ್ಲಿ ಪರಿಸ್ಥಿತಿ ಸುಧಾರಿಸಿದೆ. ಆದರೆ ಕೆಲ ಜಿಲ್ಲೆಗಳಲ್ಲಿ ಶಾಲೆಗಳು ಸಂಪೂರ್ಣ ಹಾಳಾಗಿದ್ದು, ಇಂತಹ ಕಡೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪರ್ಯಾಯ ವ್ಯವಸ್ಥೆಗಳ ಕುರಿತು ಜಿಲ್ಲಾಧಿಕಾರಿಗಳು ನಿರ್ಧಾರ ಕೈಗೊಳ್ಳುತ್ತಾರೆ. ಅಂತೆಯೇ ಓಣಂ ಪರೀಕ್ಷೆಗಳನ್ನು ಈಗಲೇ ನಡೆಸುವುದಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದೂ ಸಚಿವ ರವೀಂದ್ರ ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics