ಇಟಾನಗರ: ಟಿಬೆಟ್ ಮತ್ತು ಚೀನಾದಲ್ಲಿ ಸುರಿಯುತ್ತಿರುವ ಭಾರಿ ಮಳೆ ಇದೀಗ ಭಾರತದಲ್ಲಿ ಪ್ರವಾಹ ಭೀತಿಗೆ ಕಾರಣವಾಗಿದ್ದು, ಬ್ರಹ್ಮಪುತ್ರಾ ನದಿಗೆ ಚೀನಾ ಅಪಾರ ಪ್ರಮಾಣದ ನೀರು ಹರಿಸುವ ಕುರಿತು ಮುನ್ನೆಚ್ಚರಿಕೆ ನೀಡಿದೆ.
ಬ್ರಹ್ಮಪುತ್ರಾ ನದಿಯಲ್ಲಿ ಪ್ರವಾಹದ ಮಟ್ಟ ಏರಿಕೆಯಾಗಲಿದೆ ಎಂದು ಚೀನಾ ಭಾರತಕ್ಕೆ ಮುನ್ನೆಚ್ಚರಿಕೆ ನೀಡಿದ್ದು, ಇದರಿಂದಾಗಿ ನದಿಯ ಕೆಳಭಾಗದಲ್ಲಿರುವ ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲಿದೆ ಎಂದು ಅರುಣಾಚಲ ಪ್ರದೇಶದ ಸಂಸದ ನಿನೋಂಗ್ ಎರಿಂಗ್ ತಿಳಿಸಿದ್ದಾರೆ.
ಬ್ರಹ್ಮಪುತ್ರಾ ನದಿ ಚೀನಾದ ವಶದಲ್ಲಿರುವ ಟಿಬೆಟ್‌ನಲ್ಲಿ ಹುಟ್ಟಿ, ಅರುಣಾಚಲ ಪ್ರದೇಶದಲ್ಲಿ ಸಿಯಾಂಗ್ ಹೆಸರಿನಲ್ಲಿ ಹರಿಯುತ್ತದೆ. ಅಲ್ಲಿಂದ ಮುಂದೆ ಅಸ್ಸಾಂಗೆ ಸಾಗಿ ಅಲ್ಲಿ ಬ್ರಹ್ಮಪುತ್ರಾ ಎಂದು ಕರೆಸಿಕೊಳ್ಳುತ್ತದೆ. ನಂತರ ಬಾಂಗ್ಲಾದೇಶದ ಮೂಲಕ ಹರಿದು ಬಂಗಾಳ ಕೊಲ್ಲಿಗೆ ಸೇರುತ್ತದೆ. ಚೀನಾದಲ್ಲಿ ಬ್ರಹ್ಮಪುತ್ರಾ ನದಿಯನ್ನು ತ್ಸಾಂಗ್‌ಪೋ ಎಂದು ಕರೆಯಲಾಗುತ್ತಿದ್ದು, ಪ್ರವಾಹದ ಮಟ್ಟ 150 ವರ್ಷಗಳಲ್ಲೇ ಅಧಿಕವಾಗಿದೆ ಎಂದು ಚೀನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
'ಬ್ರಹ್ಮಪುತ್ರಾ ನದಿಯ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಅರುಣಾಚಲ ಪ್ರದೇಶದ ಹಲವೆಡೆ ಪ್ರವಾಹದ ಆತಂಕ ಎದುರಾಗಿದೆ. ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ನಿನೋಂಗ್ ಎರಿಂಗ್ ಸುದ್ದಿಸಂಸ್ಥೆಗೆ ತಿಳಿಸಿದರು.
ಚೀನಾ ಸರ್ಕಾರದ ವರದಿ ಪ್ರಕಾರ, ಬ್ರಹ್ಮಪುತ್ರಾ ನದಿಯಲ್ಲಿ 9,020 ಕ್ಯೂಮೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದುವರೆಗೆ ನದಿ ಪ್ರಶಾಂತವಾಗಿದ್ದು, ಯಾವುದೇ ಕ್ಷಣ ಪ್ರವಾಹ ಹೆಚ್ಚಬಹುದು. ಮೇ 15ರ ಬಳಿಕ ಚೀನಾ ಬ್ರಹ್ಮಪುತ್ರಾ ಮತ್ತು ಸಟ್ಲೆಜ್ ನದಿಗಳ ನೀರಿನ ಮಟ್ಟದ ಮಾಹಿತಿ ಹಂಚಿಕೊಳ್ಳಲಾರಂಭಿಸಿದೆ. ಪ್ರತಿದಿನ ಎರಡು ಬಾರಿ ಈ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos