ದೇಶ

ಬಾತ್ ರೂಂ, ಬೆಡ್ ರೂಂನಲ್ಲಿದ್ದ ರಹಸ್ಯ ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿದೆ: ಉಪರಾಷ್ಟ್ರಪತಿ ನಾಯ್ಡು

Srinivasamurthy VN
ನವದೆಹಲಿ: ನೋಟು ನಿಷೇಧವನ್ನು ವ್ಯಾಪಕವಾಗಿ ಟೀಕಿಸುತ್ತಿರುವ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಜು ಅವರು, ಬಾತ್ ರೂಂ ಮತ್ತು ಬೆಡ್ ರೂಂನಲ್ಲಿದ್ದ ರಹಸ್ಯ ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಸೇರ್ಪಡೆಯಾಗಿದೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ನಿಷೇಧಗೊಂಡಿದ್ದ 500 ಮತ್ತು 1000 ರು ಮುಖ ಬೆಲೆಯ ಬಹುತೇಕ ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸ್ ಆಗಿದೆ ಎಂದು ವರದಿ ನೀಡಿತ್ತು. ಈ ವರದಿ ಹಿನ್ನಲೆಯಲ್ಲಿ ಮೋದಿ ಸರ್ಕಾರದ ವಿರುದ್ಧ ವ್ಯಾಪಕ ಟೀಕಾ ಪ್ರಹಾರಗಳು ನಡೆದಿದ್ದವು. ಇದರ ಬೆನ್ನಲ್ಲೇ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಕೂಡ ನೋಟು ನಿಷೇಧ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಇದೀಗ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೂ ಕೂಡ ನೋಟು ನಿಷೇಧಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ವೆಂಕಯ್ಯ ನಾಯ್ಡು ಅವರು, ನೋಟು ನಿಷೇಧ ಬಗ್ಗೆ ಸುಖಾ ಸುಮ್ಮನೆ ವಿವಾದ ಹುಟ್ಟುಹಾಕಲಾಗುತ್ತಿದೆ. ನಿಜ ಹೇಳಬೇಕು ಎಂದರೆ ನಾವು ಖುಷಿಪಡಬೇಕು. ಚಲಾವಣೆಯಾಗದೇ ಬಾತ್ ರೂಂ ಮತ್ತು ಬೆಡ್ ರೂಂನಲ್ಲಿ ಅಡಗಿಸಿಡಲಾಗಿದ್ದ ಅಪಾರ ಪ್ರಮಾಣದ ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸ್ ಆಗಿದೆ. ಆದರೆ ಈ ಪೈಕಿ ಎಷ್ಟು ಹಣ ವೈಟ್ ಮನಿ ಮತ್ತು ಎಷ್ಟು ಹಣ ಬ್ಲಾಕ್ ಮನಿ ಎಂಬುದನ್ನು ಆರ್ ಬಿಐ ಮತ್ತು ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಬೇಕಿದೆ. ಕಪ್ಪು ಹಣವನ್ನು ಬಿಳಿಯಾಗಿಸುವ ಪ್ರಯತ್ನಕ್ಕೆ ಸಂಸತ್ ಅವಕಾಶ ನೀಡಿದೆ. ತೆರಿಗೆ ಕಟ್ಟಿ ಕಪ್ಪು ಹಣವನ್ನು ಬಿಳಿಯಾಗಿಸಿಕೊಳ್ಳಬಹುದು. ಇದರಿಂದ ಕೇಂದ್ರ ಸರ್ಕಾರಕ್ಕೆ ಅಪಾರ ಪ್ರಮಾಣದ ತೆರಿಗೆ ಹರಿದುಬಂದಿದೆ. ಡ್ರೈವರ್ ಗಳಿಂದ ಹಿಡಿದು ಪ್ಯೂನ್ ಗಳ ವರೆಗೂ ಇಂದು ಬ್ಯಾಂಕ್ ಖಾತೆ ತೆರೆದು ಸಕ್ರಮವಾಗಿ ವಹಿವಾಟು ನಡೆಸುತ್ತಿದ್ದಾರೆ. ಅನುಮಾನಾಸ್ಪದ ಖಾತೆಗಳ ವಿರುದ್ಧ ತನಿಖೆ ಕೂಡ ಮುಂದುವರೆದಿದೆ ಎಂದು ನಾಯ್ಡು ಹೇಳಿದ್ದಾರೆ.
SCROLL FOR NEXT