ದೇಶ

ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಸಾಧನೆ ಮಾಡಿದ ಸ್ವಪ್ನಾ ಬರ್ಮನ್: ರಿಕ್ಷಾ ಚಾಲಕನ ಮಗಳ ಯಶೋಗಾಥೆ

Srinivas Rao BV
ಜಕಾರ್ತಾ: ಏಷ್ಯನ್ ಗೇಮ್ಸ್ ಹೆಪ್ಟಾಥ್ಲಾನ್ ವಿಭಾಗದಲ್ಲಿ ಸ್ವಪ್ನಾ ಬರ್ಮನ್ ದಾಖಲೆಯ ಚಿನ್ನದ ಪದಕ ಗಳಿಸಿದ್ದಾರೆ.  ಪಂದ್ಯದಲ್ಲಿ 10 ಇತರ ಅಥ್ಲೀಟ್ ಗಳನ್ನು ಎದುರಿಸಿದಂತೆಯೇ ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿ ಸ್ವಪ್ನಾ ಬರ್ಮನ್ ಈ ಸಾಧನೆ ಮಾಡಿದ್ದಾರೆ. 
ರಿಕ್ಷಾ ಡ್ರೈವರ್ ಆಗಿದ್ದ ಸ್ವಪ್ನಾ ಬರ್ಮನ್ ಅವರ ತಂದೆ  ಪಂಚನನ್ ಬರ್ಮನ್ ಆಕೆಯ ಬಾಲ್ಯದಲ್ಲಿ ತಂದೆಗೆ ಪಾರ್ಶ್ವವಾಯು ತಗುಲಿತ್ತು. ಟೀ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ತಾಯಿ ಕುಟುಂಬಕ್ಕೆ ಆಧಾರವಾಗಿದ್ದರು, ಅಷ್ಟೇ ಅಲ್ಲದೇ ಮಗಳ ಕ್ರೀಡಾಭ್ಯಾಸಕ್ಕೂ ನೆರವಾದರು. 
ಕಾಲುಗಳಲ್ಲಿ 6 ಬೆರಳುಗಳೊಂದಿಗೆ ಹುಟ್ಟಿದ ಸ್ವಪ್ನಾ ಬರ್ಮನ್ ಕಸ್ಟಮೈಸ್ ಮಾಡಿದ ಶೂಗಳನ್ನು ಧರಿಸಬೇಕಿತ್ತು. ಆದರೆ ಅದಕ್ಕೆ ಖರ್ಚು ಮಾಡುವಷ್ಟು ಅನುಕೂಲ ಆಕೆಯ ಬಳಿ ಇರಲಿಲ್ಲ. ಆದ್ದರಿಂದ ಕಷ್ಟದಲ್ಲೇ ಆಕೆ ತನ್ನ ಪ್ರಾಕ್ಟೀಸ್ ಸೆಷನ್ ಗಳನ್ನು ಎದುರುಗೊಳ್ಳಬೇಕಿತ್ತು. ಇಷ್ಟೆಲ್ಲಾ ಕಷ್ಟಗಳು ಸಾಲದು ಎಂಬಂತೆ ಏಷ್ಯನ್ ಗೇಮ್ಸ್ ಗೆ ತೆರಳುವುದಕ್ಕೂ ಮುನ್ನ ಆಕೆಗೆ ಹಲ್ಲಿನಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸ್ವಪ್ನಾ ಬರ್ಮನ್ ನೋವು ಕಡಿಮೆ ಮಾಡಿಕೊಳ್ಳುವುದಕ್ಕೆ ಟೇಪ್ ಧರಿಸಿ ಚಿನ್ನದ ಪದಕ ಗೆದ್ದಿದ್ದಾರೆ. 
ತನಗೆ ಕಸ್ಟಮೈಸ್ಡ್ ಶೂಗಳ ಅನುಕೂಲ ಸಿಕ್ಕರೆ ಇನ್ನಷ್ಟು ಸಾಧನೆ ಮಾಡುವುದಾಗಿ ಬರ್ಮನ್ ಹೇಳಿದ್ದಾರೆ. ಈಗ ನಾನು 5 ಬೆರಳಿರುವ ಜನರು ಧರಿಸುವ ಶೂಗಳನ್ನೇ ಧರಿಸುತ್ತಿದ್ದೇನೆ, ಸಾಮಾನ್ಯ ಶೂ ಧರಿಸುವುದರಿಂದ ತರಬೇತಿ ವೇಳೆ ತುಂಬಾ ನೋವಾಗುತ್ತೆ ಎಂದು ಸ್ವಪ್ನಾ ಬರ್ಮನ್ ಹೇಳಿದ್ದಾರೆ. 
SCROLL FOR NEXT