ದೇಶ

ನಾನು ಜಾಮೀನುದಾರನಷ್ಟೇ, ಸಾಲಗಾರನಲ್ಲ, ಮೋಸಗಾರನೂ ಅಲ್ಲ: ಉದ್ಯಮಿ ವಿಜಯ್ ಮಲ್ಯ

Srinivasamurthy VN
ಲಂಡನ್: ನಾನು ಜಾಮೀನುದಾರನಷ್ಟೇ, ಸಾಲಗಾರನಲ್ಲ, ಮೋಸಗಾರನೂ ಅಲ್ಲ ಎಂದು ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ.
ಭಾರತೀಯ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ವಂಚಿಸಿ ಲಂಡನ್ ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡುವ ಕುರಿತು ಮಹತ್ವ ತೀರ್ಪನ್ನು ಇಂದು ಲಂಡನ್ ಕೋರ್ಟ್ ನೀಡುತ್ತಿದ್ದು, ಇದರ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿರುವ ವಿಜಯ್ ಮಲ್ಯ ನಾನು ಸಾಲಗಾರನಲ್ಲ. ಕಿಂಗ್ ಫಿಷರ್ ಏರ್ ಲೈನ್ಸ್ ತೆಗೆದುಕೊಂಡಿದ್ದ ಸಾಲಕ್ಕೆ ಜಾಮೀನುದಾರನಾಗಿದ್ದೆ. ಆದರೆ ಕಿಂಗ್ ಫಿಷರ್ ಏರ್ ಲೈನ್ಸ್ ಉದ್ಯಮದಿಂದ ನಷ್ಟವಾಯಿತು. ಹೀಗಾಗಿ ಸಂಸ್ಥೆ ನಷ್ಟದ ಪಾಲಾಗಿದ್ದು, ನಾನು ಆ ನಷ್ಟದ ಜವಾಬ್ದಾರನಾಗಿದ್ದೇನೆ ಎಂದು ಮಲ್ಯ ಹೇಳಿದ್ದಾರೆ.
ಇದೇ ವೇಳೆ ತಮ್ಮ ವಿರುದ್ಧ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ರಾಜಕೀಯ ಮೇಲಾಟ ನಡೆಯುತ್ತಿದೆ ಎಂದು ಮಲ್ಯ ಆರೋಪಿಸಿದ್ದು, ಭಾರತ ಸರ್ಕಾರ ಉದ್ದೇಶಪೂರ್ವಕವಾಗಿಯೇ ಸಾಲ ತೀರಿಸುವ ನನ್ನ ಯಾವುದೇ ಪ್ರಸ್ತಾಪವನ್ನು ತಿರಸ್ಕರಿಸುವಂತೆ ಬ್ಯಾಂಕ್ ಗಳ ಮೇಲೆ ಒತ್ತಡ ಹೇರುತ್ತಿದೆ. ಇದೇ ಕಾರಣಕ್ಕೆ ನನ್ನ ಯಾವುದೇ ಪ್ರಸ್ತಾಪಗಳನ್ನೂ ಬ್ಯಾಂಕ್ ಗಳು ಒಪ್ಪುತ್ತಿಲ್ಲ. ನಾನು ಯಾರಿಗೂ ಮೋಸ ಮಾಡುವ ಉದ್ದೇಶ ಹೊಂದಿಲ್ಲ. ನಾನು ಮೋಸಗಾರನೂ ಅಲ್ಲ. ನಾನು ತೆಗೆದುಕೊಂಡ ಮೂಲ ಸಾಲದ ಮೊತ್ತವನ್ನು ನಾನು ತೀರಿಸಲು ಸಿದ್ಧನಿದ್ದೇನೆ. ಈ ಸಂಬಂಧ ಕರ್ನಾಟಕ ಹೈಕೋರ್ಟ್ ಗೆ ನನ್ನ ಸುಮಾರು 14 ಸಾವಿರ ಕೋಟಿ ಮೌಲ್ಯದ ಆಸ್ತಿ ದಾಖಲೆ ನೀಡಿದ್ದೇನೆ. ಹೀಗಿದ್ದೂ ಜಾರಿ ನಿರ್ದೇಶನಾಲಯ ನನ್ನ ಆಸ್ತಿಗಳನ್ನು ಮುಟ್ಟುಗೋಲು ಹಾಕುತ್ತಿದೆ ಎಂದು ಮಲ್ಯ ಹೇಳಿದ್ದಾರೆ.
ಅಸಲು ತೀರಿಸಲು 2 ಬಾರಿ ಆಫರ್
ಸಾಲದ ಅಸಲು ತೀರಿಸುವುದಾಗಿ ಮಲ್ಯ ಎರಡು ಬಾರಿ ಪ್ರಸ್ತಾವನೆ ಮುಂದಿಟ್ಟಿದ್ದರು. ಆದರೆ ಇದಕ್ಕೆ ಬ್ಯಾಂಕುಗಳು ಸಮ್ಮತಿ ನೀಡಿಲ್ಲ. 2016ರಲ್ಲಿ ಸಾಲದ ಅಸಲಿನ ಶೇ.80 ಮೊತ್ತ ಪಾವತಿಸುವುದಾಗಿ ಮಲ್ಯ ಬ್ಯಾಂಕ್​ಗಳಿಗೆ ಆಫರ್ ಕೊಟ್ಟಿದ್ದರು. ಕಳೆದ ವಾರ ಶೇ. 100 ಅಸಲು ಮೊತ್ತ ಮರುಪಾವತಿಸುವೆ. ದಯಮಾಡಿ ಹಣ ತೆಗೆದುಕೊಳ್ಳಿ ಎಂದು ಟ್ವೀಟ್ ಮಾಡಿದ್ದರು.
SCROLL FOR NEXT