ನವದೆಹಲಿ: ಪಂಚ ರಾಜ್ಯ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು ಈವರೆಗಿನ ಫಲಿತಾಂಶದ ಅನ್ವಯ ಒಟ್ಟು ಐದು ರಾಜ್ಯಗಳ ಪೈಕಿ 3 ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ತೆಲಂಗಾಣದಲ್ಲಿ ಟಿಆರ್ ಎಸ್, ಮಿಜೋರಾಂನಲ್ಲಿ ಎಂಎನ್ ಎಫ್ ಗದ್ದುಗೆ ಹಿಡಿಯುವತ್ತ ಹೆಜ್ಜೆ ಹಾಕಿವೆ.
ಮಧ್ಯ ಪ್ರದೇಶದಲ್ಲಿ 230 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ 110 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಆಡಳಿತಾ ರೂಢ ಬಿಜೆಪಿ ಪಕ್ಷ 106 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಉಳಿದಂತೆ ಬಿಎಸ್ ಪಿ 4 ಕ್ಷೇತ್ರಗಳಲ್ಲಿ ಮತ್ತು ಇತರರು 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ರಾಜಸ್ಥಾನದ ಒಟ್ಟು 199 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 100 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಬಿಜೆಪಿ 80 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇಲ್ಲಿಯೂ ಬಿಎಸ್ ಪಿ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಇತರರು 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮತ್ತೊಂದೆಡೆ ಛತ್ತೀಸ್ ಘಡದಲ್ಲೂ ಕಾಂಗ್ರೆಸ್ ನಗೆ ಬೀರಿದ್ದು, ಇಲ್ಲಿನ ಒಟ್ಟು 90 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 53 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 26 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಬಿಎಸ್ ಪಿ ಮೈತ್ರಿಕೂಟ 9 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಇತ್ತ ತೆಲಂಗಾಣದಲ್ಲಿ ಟಿಆರ್ ಎಸ್ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದ್ದು, ಈ ಬಾರಿಯೂ ಸಿಎಂ ಚಂದ್ರಶೇಖರರಾವ್ ಅವರ ಸರ್ಕಾರ ಮುಂದುವರೆಯುವುದು ಸ್ಪಷ್ಟವಾಗಿದೆ. ತೆಲಂಗಾಣದ ಒಟ್ಟು 119 ಕ್ಷೇತ್ರಗಳ ಪೈಕಿ ಟಿಆರ್ ಎಸ್ 88 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಮೈತ್ರಿಕೂಟ 21 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಇಲ್ಲಿ ಬಿಜೆಪಿ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಇನ್ನು ಮಿಜೋರಾಂನಲ್ಲಿ ಎಂಎನ್ಎಫ್ ಪಕ್ಷ ಅಧಿಕಾರ ರಚನೆಯತ್ತ ದಾಪುಗಾಲಿರಿಸಿದ್ದು, ಇಲ್ಲಿ 40 ಕ್ಷೇತ್ರಗಳ ಪೈಕಿ ಎಂಎನ್ಎಫ್ 26 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಹಕ್ಕು ಮಂಡಿಸಿದೆ.