ಬೆಂಗಳೂರು: ನಾವು ಹೇಳಿದ್ದೆಲ್ಲ ಇಲ್ಲಿ ನಡೆಯೋದಿಲ್ಲ. 'ಕಾಂಗ್ರೆಸ್ ಮುಕ್ತ ಭಾರತ' ಕೇವಲ ಬಿಜೆಪಿ ಪಕ್ಷದ ಅಹಮಿಕೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿದೇವೇಗೌಡ ಹೇಳಿದ್ದಾರೆ.
ಮಂಗಳವಾರ ಪ್ರಕಟವಾದ ಪಂಚ ರಾಜ್ಯ ಚುನಾವಣಾ ಫಲಿತಾಂಶದ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ದೇವೇಗೌಡ ಅವರು, ಹಾಲಿ ಚುನಾವಣಾ ಫಲಿತಾಂಶ ನಮ್ಮೆಲ್ಲರಿಗೂ ಒಂದು ಸ್ಪಷ್ಟ ಸಂದೇಶ ರವಾನಿಸಿದ್ದು, ನಾವು ಹೇಳಿದ್ದೆಲ್ಲ ಇಲ್ಲಿ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
'ಇದು ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜೆಗಳು ಹೇಳಿದಂತೆ ನಾವು ಕೇಳಬೇಕಷ್ಟೇ. ನಾವು ಹೇಳಿದ್ದೆಲ್ಲ ಇಲ್ಲಿ ನಡೆಯುವುದಿಲ್ಲ. ಕಾಂಗ್ರೆಸ್ ಮುಕ್ತ ಭಾರತ, ಪ್ರತಿಪಕ್ಷ ಮುಕ್ತ ಭಾರತ ಮಾಡುತ್ತೇವೆಂಬುದೆಲ್ಲ ಕೇವಲ ಅಹಮಿಕೆ. ಜನ ಇಂದು ಅಹಂ ಮುಕ್ತ ಭಾರತ ಮಾಡಿದ್ದಾರೆ. ಸಮಸ್ಯೆ ಮುಕ್ತ ಭಾರತ ಮಾಡುವುದರತ್ತ ಅಧಿಕಾರರೂಢ ಬಿಜೆಪಿ ಮನಸ್ಸು ಮಾಡಲಿ' ಎಂದು ದೇವೇಗೌಡ ಟ್ವೀಟ್ ಮಾಡಿದ್ದಾರೆ.
ಇನ್ನು ಪಂಚ ರಾಜ್ಯ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ತೆಲಂಗಾಣದಲ್ಲಿ ಟಿಆರ್ ಎಸ್ ಅಧಿಕಾರ ರಚನೆಗೆ ಸಿದ್ಧವಾಗಿದ್ದು, ಮಿಜೋರಾಂ ನಲ್ಲಿ ಎಂಎನ್ ಎಫ್ ಸರ್ಕಾರ ರಚನೆಯತ್ತ ಸಾಗಿದೆ. ಇನ್ನು ರಾಜಸ್ಥಾನ ಮತ್ತು ಛತ್ತೀಸ್ ಗಡದಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆಯಲ್ಲಿದೆ. ಆದರೆ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಇತ್ತೀಚಿನ ವರದಿಗಳ ಅನ್ವಯ ಕಾಂಗ್ರೆಸ್ 109 ಕ್ಷೇತ್ರಗಳಲ್ಲಿ ಮತ್ತು ಬಿಜೆಪಿ 111 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಇಲ್ಲಿ 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಬಿಎಸ್ ಪಿ ನಿರ್ಣಾಯಕ ಪಾತ್ರವಹಿಸುವ ಸಾಧ್ಯತೆ ಇದೆ.