ವಿವಾಹಪೂರ್ವ ಕಾರ್ಯಕ್ರಮದಲ್ಲಿ ಇಶಾ ಅಂಬಾನಿ - ಆನಂದ್ ಪಿರಾಮಲ್ ಹಾಗೂ ಕುಟುಂಬ
ಉದಯಪುರ್: ಭಾರತ ಅತ್ಯಂತ ದುಬಾರಿ ಮದುವೆ ಸಿದ್ಧವಾಗುತ್ತಿದ್ದು, ದೇಶದ ನಂಬರ್ 1 ಶ್ರೀಮಂತ, ಉದ್ಯಮಿ ಮುಖೇಶ್ ಅಂಬಾನಿ ಅವರು ತಮ್ಮ ಪುತ್ರಿ ಇಶಾ ಅಂಬಾನಿಯ ಮದುವೆಗೆ ಬರೊಬ್ಬರಿ 100 ಮಿಲಿಯನ್ ಡಾಲರ್(ಸುಮಾರು 710 ಕೋಟಿ ರು.) ಖರ್ಚು ಮಾಡುತ್ತಿದ್ದಾರೆ.
ಇಶಾ ಅಂಬಾನಿ ಅವರು ಡಿಸೆಂಬರ್ 12ರಂದು ಪಿರಾಮಲ್ ಸಮೂಹದ ಮುಖ್ಯಸ್ಥ ಅಜಯ್ ಪಿರಾಮಲ್ ಪುತ್ರ ಆನಂದ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಉದಯ್ ಪುರದಲ್ಲಿ ಅದ್ಧೂರಿ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯುತ್ತಿವೆ.
ವಿವಾಹಪೂರ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವಿಶ್ವದ ಖ್ಯಾತನಾಮ ಉದ್ಯಮಿಗಳು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈಗಾಗಲೇ ಉದಯ್ಪುರ್ದತ್ತ ಆಗಮಿಸಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಕ್ಲಿಂಟನ್ ಅವರ ಪತ್ನಿ ಹಿಲರಿ ಕ್ಲಿಂಟನ್, ಸಚಿನ್ ತೆಂಡುಲ್ಕರ್, ಉದ್ಯಮಿ ಲಕ್ಷ್ಮಿ ಮಿತ್ತಲ್ ಕುಟುಂಬ, ಹಫ್ಫಿಂಗ್ಟನ್ ಫೋಸ್ಟ್ನ ಅರಿಯಾನಾ ಹಫ್ಫಿಂಗ್ಟನ್, ನೆಸ್ಲೆ ಚೇರ್ಮನ್ ಎಮಿರಟಸ್, ಜೆಪಿ ಮೋರ್ಗನ್ ಚೇರ್ಮನ್ ನಿಕಾಲೊಸ್ ಅಗಜಿನ್, ಎಎನ್ಜೆಡ್ ಸಿಇಒ ಫರ್ಹಾನ್ ಫಾರೂಕಿ ಸೇರಿದಂತೆ ಅನೇಕ ಉದ್ಯಮಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಇನ್ನು ಬಾಲಿವುಡ್ ತಾರೆಗಳಾದ ವಿದ್ಯಾಬಾಲನ್, ಪತಿ ಸಿದ್ಧಾರ್ಥ್ ರಾಯ್ ಕಪೂರ್, ಜಾನ್ ಅಬ್ರಾಹಂ, ದೇವೇಂದ್ರ ಫಡ್ನವೀಸ್ ಸೇರಿ ವಿವಿಧ ಬಾಲಿವುಡ್ ತಾರೆಗಳು, ಉದ್ಯಮಿಗಳು ಮತ್ತು ರಾಜಕಾರಣಿಗಳು ಇಶಾ ಅಂಬಾನಿ ವಿವಾಹ ಪೂರ್ವ ಸಂಭ್ರಮಕ್ಕೆ ಸಾಕ್ಷಿಯಾಗಲು ಉದಯಪುರಕ್ಕೆ ಆಗಮಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ವಿವಾಹಪೂರ್ವ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗಾಗಿ 100 ಚಾರ್ಟೆರ್ಡ್ ವಿಮಾನಗಳನ್ನು ಬುಕ್ ಮಾಡಲಾಗಿದೆ.
ವಿವಾಹದ ಅಂಗವಾಗಿ ಶುಕ್ರವಾರದಿಂದಲೇ ಅನ್ನಸೇವಾ ಕಾರ್ಯಕ್ರಮ ಆರಂಭಿಸಿದ್ದು, ಸುಮಾರು 5 ಸಾವಿರ ಜನರಿಗೆ ಉಪಚರಿಸಲಾಗಿದೆ. ಉದಯಪುರದ ಒಬೆರಾಯ್ ಉದಯ್‌ವಿಲಾಸ್ ಮತ್ತು ತಾಜ್ ಲೇಕ್ ಪ್ಯಾಲೆಸ್‌ನಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯುತ್ತಿದ್ದು, ಮುಂಬೈನ ಅಂಬಾನಿಯ ಆಂಟಿಲಿಯಾ ನಿವಾಸದಲ್ಲಿ ಡಿ. 12ಕ್ಕೆ ಅದ್ಧೂರಿ ವಿವಾಹ ನೆರವೇರಲಿದೆ.