ನವದೆಹಲಿ: ಕೃಷಿ ಉತ್ಪನ್ನಗಳ ವಿಚಾರದಲ್ಲಿ ಇನ್ನೂ ಹಳೆಯ ಚಿಂತನೆಗಳಿಗೆ ಜೋತು ಬಿದ್ದಿರುವ ನೀತಿಗಳಿಗೆ ತಿಲಾಂಜಲಿ ಹೇಳಿ ಹೊಸ ನೀತಿಯನ್ನು ಜಾರಿಗೆ ತರಲು ನೀತಿ ಆಯೋಗ ಸಲಹೆ ನೀಡಿದೆ.
ಕೃಷಿ ಕ್ಷೇತ್ರದ ಸಮಸ್ಯೆ ವಾಸ್ತವವಾದದ್ದು ಬೆಳೆಗಳಿಗೆ ಕೇವಲ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡುವುದರಿಂದ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಸಾಧ್ಯವಿಲ್ಲ. ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡುವುದರ ಬದಲು ಕನಿಷ್ಠ ಮೀಸಲು ದರ (ಎಂಆರ್ ಪಿ)ಯನ್ನು ನಿಗದಿಪಡಿಸಿ ಕೃಷಿ ಉತ್ಪನ್ನಗಳನ್ನು ಮಂಡಿಗಳಲ್ಲಿ ಹಾರಾಜು ಹಾಕುವುದು ಸೂಕ್ತ ಪರಿಹಾರ ಎಂದು ನೀತಿ ಆಯೋಗದ ಥಿಂಕ್ ಟ್ಯಾಂಕ್ ನ ಡಾಕ್ಯುಮೆಂಟ್ ನ್ಯೂ ಇಂಡಿಯಾ@75 ಸಲಹೆ ನೀಡಿದೆ.
ಮಂಡಿಗಳಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ ಎಂ ಆರ್ ಪಿ ಪ್ರಾರಂಭಿಕ ಬೆಲೆ ಆಗಬಹುದು, ಇದರಿಂದಾಗಿ ಕೃಷಿಕರಿಗೂ ಲಾಭ ಬರಲಿದೆ ಎಂದು ನೀತಿ ಆಯೋಗ ಸಲಹೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸುತ್ತಿವೆ. ಈ ಸಂದರ್ಭದಲ್ಲೇ ಕೇಂದ್ರ ಸರ್ಕಾರಕ್ಕೆ ನೀತಿ ಆಯೋಗ ಕ್ರಾಂತಿಕಾರಿ ಸಲಹೆಯನ್ನು ನೀಡಿದ್ದು ಕೃಷಿ ಉತ್ಪನ್ನಗಳಿಗೆ ಎಂಎಸ್ ಪಿ ಬದಲು ಎಂಆರ್ ಪಿ ನಿಗದಿಪಡಿಸಿ ಎಂದು ಹೇಳಿದೆ.
ಇದಕ್ಕೂ ಮುನ್ನ ರೈತರ ಸಾಲ ಮನ್ನಾ ಮಾಡುವ ಪದ್ಧತಿ ಸೂಕ್ತವಾದುದ್ದಲ್ಲ ಎಂದು ನೀತಿ ಆಯೋಗದ ಉಪಾಧ್ಯಕ್ಷ ಪನಗಾರಿಯಾ ಅಭಿಪ್ರಾಯಪಟ್ಟಿದ್ದರು.