ದೇಶ

ಹನುಮಂತ ದಲಿತನು ಅಲ್ಲ, ಮುಸ್ಲಿಮನೂ ಅಲ್ಲ; ಜಾಟ್‌ ಎಂದ ಯುಪಿ ಸಚಿವ

Lingaraj Badiger
ಲಖನೌ: ಹನುಮಂತ(ಆಂಜನೇಯ) ಯಾವ ಜಾತಿಗೆ ಸೇರಿದವರು ಎನ್ನುವ ಕುರಿತು ಭಾರತೀಯ ಜನತಾ ಪಕ್ಷ(ಬಿಜೆಪಿ)ದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದ್ದು, ಇದೀಗ ಉತ್ತರ ಪ್ರದೇಶ ಬಿಜೆಪಿ ಸಚಿವರೊಬ್ಬರು, ಹನುಮಂತ ದಲಿತನು ಅಲ್ಲ, ಮುಸ್ಲಿಮನೂ ಅಲ್ಲ, ಆತ ಜಾಟ್ ಎಂದು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ.
ಹನುಮಂತ ಜಾಟ್‌ ಸಮುದಾಯಕ್ಕೆ ಸೇರಿದವನು ಎಂದು ಉತ್ತರ ಪ್ರದೇಶದ ಧಾರ್ಮಿಕ ವ್ಯವಹಾರಗಳ ಖಾತೆ ಸಚಿವ ಲಕ್ಷ್ಮಿ ನಾರಾಯಣ್‌ ಚೌಧರಿ ಅವರು ಹೇಳಿದ್ದಾರೆ.
ಹನುಮನ ಲಕ್ಷಣಗಳು ಜಾಟ್‌ ಸಮುದಾಯದ ವ್ಯಕ್ತಿಗೆ ಹೋಲುತ್ತವೆ. ನಾನು ಹನುಮಂತ ಜಾಟ್‌ ಎಂದು ಭಾವಿಸುತ್ತೇನೆ. ಯಾಕೆಂದರೆ ಯಾರಾದರೂ ತೊಂದರೆಗೆ ಸಿಲುಕಿದರೆ ಜಾಟ್‌ ಸಮುದಾಯವರು ನೆರವಿಗೆ ಬರುತ್ತಾರೆ. ಅದೇ ರೀತಿ ಹನುಮಂತನ ನಡವಳಿಕೆಯು ಕೂಡ ಇದನ್ನು ಹೋಲುವಂತೆಯೇ ಇದೆ. ಅಂದು ಸೀತಾಮಾತೆಯನ್ನು ರಾವಣ ಅಪಹರಿಸಿದ್ದಾಗ ಹನುಮ ಕೂಡ ರಾಮನ ಅನುಯಾಯಿಯಾಗಿ ಸಹಾಯಕ್ಕೆ ನಿಂತಿದ್ದ ಎಂದರು.
ವ್ಯಕ್ತಿಯ ವಂಶಾವಳಿಯನ್ನು ಆತನ ನಡವಳಿಕೆಯ ಆಧಾರದಿಂದಲೂ ಗುರುತಿಸಬಹುದು. ಸನಾತನ ಧರ್ಮದಲ್ಲಿ ಯಾರು ನಂಬಿಕೆಯನ್ನಿಟ್ಟುಕೊಂಡಿರುತ್ತಾರೋ ಅವರು ಖಂಡಿತವಾಗಿಯು ಹನುಮನ ಪೂಜೆ ಮಾಡುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.
ಈ ಹಿಂದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹನುಮಂತ ದಲಿತ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. ವಿವಾದ ತಣ್ಣಗಾಗುವ ಮೊದಲೇ ಉತ್ತರ ಪ್ರದೇಶ ಬಿಜೆಪಿ ನಾಯಕ ಬುಕ್ಕಾಲ್ ನವಾಬ್ ಅವರು ಹನುಮಂತ ಮುಸ್ಲಿಮ ಎಂದು ಹೇಳಿದ್ದರು.
SCROLL FOR NEXT