ದೇಶ

ನಾಸಿರುದ್ದೀನ್ ಶಾ ಹೇಳಿಕೆ ಪರ ನಿಂತ ಅಶುತೋಶ್ ರಾಣಾ, ಮಧುರ್ ಬಂಡಾರ್ಕರ್

Srinivas Rao BV
ಬುಲಂದ್ ಶಹರ್ ಹಿಂಸಾಚಾರದ ಬಗ್ಗೆ ಮಾತನಾಡುತ್ತಾ, ಭಾರತದಲ್ಲಿ ನನ್ನ ಮಕ್ಕಳ ಭವಿಷ್ಯದ ಬಗ್ಗೆ ಆತಂಕವಾಗುತ್ತಿದೆ ಎಂದು ಹೇಳಿದ್ದ ಬಾಲಿವುಡ್ ನಟ ನಾಸಿರುದ್ದೀನ್ ಶಾ ಹೇಳಿಕೆಯನ್ನು ಬಹುಭಾಷಾ ನಟರಾದ ಅಶುತೋಶ್ ರಾಣಾ, ನಿರ್ದೇಶಕ ಮಧುರ್ ಬಂಡಾರ್ಕರ್ ಸಮರ್ಥಿಸಿದ್ದಾರೆ. 
ನಾಸಿರುದ್ದೀನ್ ಶಾ ಹೇಳಿಕೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಪ್ರತ್ರಿಯೆ ನೀಡಿರುವ ಅಶುತೋಶ್ ರಾಣಾ ಮತ್ತು ಮಧುರ್ ಬಂಡಾರ್ಕರ್,  ತಮ್ಮ ವಿಚಾರಗಳನ್ನು ಹಂಚಿಕೊಳ್ಳುವುದಕ್ಕೆ ಪ್ರತಿಯೊಬ್ಬರಿಗೂ ಹಕ್ಕಿದೆ ಎಂದು ಹೇಳಿದ್ದಾರೆ. ಎಲ್ಲರೂ ತಮ್ಮ ವಿಚಾರವನ್ನು ಯಾವುದೇ ಭಯವಿಲ್ಲದೇ  ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಕು ಅಂತಹ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಎಚ್ಚರಿಕೆಯಿಂದ ಇರಬೇಕು, ನಮ್ಮ ಸಹೋದರ, ಸ್ನೇಹಿತ ಏನನ್ನೋ ಹೇಳುತ್ತಿದ್ದಾನೆ ಎಂದರೆ ಅದನ್ನು ಕೇಳುವುದಷ್ಟೇ ಅಲ್ಲ ಅದರ ಬಗ್ಗೆ ಯೋಚನೆ ಮಾಡಬೇಕು ಎಂದು ರಾಣಾ ಮಾಧ್ಯಮಗಳಿಗೆ ಹೇಳಿದ್ದಾರೆ. 
ಸರಳತೆ ಮತ್ತು ಸೌಮ್ಯತೆ ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತದೆ, ಅದೇ ನಮ್ಮ ಸಂಸ್ಕೃತಿಯೂ ಹೌದು ಎಂದು ಅಶುತೋಶ್ ರಾಣಾ ಹೇಳಿದ್ದಾರೆ. ಇದೇ ವೇಳೆ ಮಧುರ್ ಬಂಡಾರ್ಕರ್ ಸಹ ಶಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಪ್ರತಿಯೊಬ್ಬರಿಗೂ ಅವರದ್ದೇ ಆದ ದೃಷ್ಟಿಕೋನವಿರುತ್ತದೆ. ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕಿದೆ. ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೆ, ಆದರೆ ನಮಗೆ ಇಲ್ಲಿ ಭಯವಿದೆ ಅಂತ ಅನಿಸುವುದಿಲ್ಲ. ಭಾರತದಲ್ಲಿ ಎಲ್ಲರೂ ಸಮಾನರು ಹಾಗೂ ಅಸಹಿಷ್ಣುತೆ ಅಥವಾ ಇನ್ಯಾವುದೋ ಸಮಸ್ಯೆ ಇದೆ ಅಂತ ನನಗೆ ಅನಿಸುವುದಿಲ್ಲ ಎಂದು ಮಧುರ್ ಬಂಡಾರ್ಕರ್ ಹೇಳಿದ್ದಾರೆ.
SCROLL FOR NEXT